ಭಾರೀ ಮಳೆಗೆ ಗೋಡೆ ಕುಸಿದು 7 ಜನರ ದಾರುಣ ಸಾವು
ಹೈದರಾಬಾದ್, ಮೇ 08: ದೇಶದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು, ತೆಲಂಗಾಣ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ತೆಲಂಗಾಣ ನಿವಾಸಿಗಳ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹೈದರಾಬಾದ್ ನಗರ ಮಳೆಯಿಂದ ನಗರ ತತ್ತರಿಸಿ ಹೋಗಿದೆ. ವರುಣನ ಆರ್ಭಟಕ್ಕೆ ಬೆಳ್ಳಂಬೆಳಗ್ಗೆಯೇ ದುರಂತವೊಂದು ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್‌ನ ಬಾಚುಪಲ್ಲಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ನಾಲ್ಕು ವರ್ಷದ ಮಗು ಕೂಡ ಗೋಡೆ ಕೆಳಗೆ ಸಿಲುಕಿ ಮಲಗಿದಲ್ಲಿಯೇ ಕೊನೆಯುಸಿರೆಳೆದಿದೆ.

ಬಾಚುಪಲ್ಲಿ ಪೊಲೀಸರ ಪ್ರಕಾರ, ಮೃತರು ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ಸೇರಿದ ವಲಸೆ ಕಾರ್ಮಿಕರಾಗಿದ್ದು, ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಮಾಡುತ್ತಿದ್ದರು. ಸದ್ಯ ಅಲ್ಲಿಯೇ ಕಾರ್ಮಿಕರು ವಾಸವಿದ್ದು, ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದಿದೆ ಎಂದು ವರದಿಯಾಗಿದೆ.
ಗೋಡೆ ಅಡಿ ಸಿಲುಕಿದ್ದ ಏಳು ಜನರ ಮೃತದೇಹಗಳನ್ನು ಸದ್ಯ ಹೊರ ತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಭಾರೀ ಮಳೆಯಿಂದ ಹೈದರಾಬಾದ್ ನಗರದ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸದ್ಯ ಡಿಆರ್ಎಫ್ ಘಟಕ ರಕ್ಷಣೆಗೆ ದೌಡಾಯಿಸಿದ್ದು, ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications