ಮನೆ ಬಾಗಿಲಿಗೆ ಪಾರ್ಸೆಲ್ ತಲುಪಿಸಲಿದೆ ಭಾರತೀಯ ರೈಲ್ವೆ
ಬೆಂಗಳೂರು, ಏಪ್ರಿಲ್ 08; ಭಾರತೀಯ ರೈಲ್ವೆ ಹೊಸ ಸೇವೆಯನ್ನು ಆರಂಭಿಸಿದೆ. ಅಂಚೆ ಇಲಾಖೆ ಮತ್ತು ರೈಲ್ವೆ ಜಂಟಿಯಾಗಿ ಈ ಸೇವೆ ಆರಂಭ ಮಾಡಿವೆ. ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಜನರ ಮನೆ ಬಾಗಿಲಿಗೆ ಭಾರತೀಯ ರೈಲ್ವೆ ಪಾರ್ಸೆಲ್ ತಲುಪಿಸಲಿದೆ. ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಇಲಾಖೆ ಇದಕ್ಕಾಗಿ ಜಂಟಿಯಾಗಿ ಜಾಯಿಂಟ್ ಪಾರ್ಸೆಲ್ ಪ್ರಾಡಕ್ಟ್ (ಜೆಪಿಪಿ) ಎಂಬ ವ್ಯವಸ್ಥೆ ರೂಪಿಸಿವೆ.
ಮನೆ ಬಾಗಿಲಿಗೆ ಪಾರ್ಸೆಲ್ ಸೇವೆಯನ್ನು ಅಂಚೆ ಇಲಾಖೆ ಒದಗಿಸಲಿದೆ. ನಿಲ್ದಾಣದಿಂದ ನಿಲ್ದಾಣಕ್ಕೆ ಪಾರ್ಸೆಲ್‌ಗಳನ್ನು ಭಾರತೀಯ ರೈಲ್ವೆ ತಲುಪಿಸಲಿದೆ ಎಂದು ಲೋಕಸಭೆಗೆ ಸಚಿವರು ಉತ್ತರ ನೀಡಿದ್ದಾರೆ.

ಪ್ರಾಯೋಗಿಕವಾಗಿ ಮಾರ್ಚ್ 31ರಂದು ಸೂರತ್, ವಾರಣಾಸಿ ನಡುವೆ ಈ ಯೋಜನೆಯನ್ನು ಆರಂಭಿಸಲಾಗಿದೆ. ವ್ಯಾಪಾರ, ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಜೆಪಿಪಿ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಪಾರ್ಸೆಲ್ ಸಂಗ್ರಹ ಮಾಡುವುದು, ಕೇಂದ್ರಕ್ಕೆ ತಲುಪಿಸುವುದು, ತಲುಪಿಸಬೇಕಾದ ಜಾಗಕ್ಕೆ ಹಸ್ತಾಂತರ ಮಾಡುವುದುನ್ನು ಎರಡು ಇಲಾಖೆಗಳು ಜಂಟಿಯಾಗಿ ಮಾಡಲಿವೆ. ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಸರ್ಕಾರದ ಇಲಾಖೆಯಿಂದ ಜಾರಿಗೊಳಿಸಲಾಗಿದೆ.
ಸೆಂಟ್ರಲ್ ರೈಲ್ವೆ; ಸೆಂಟ್ರಲ್ ರೈಲ್ವೆ ವಿಭಾಗ ಪ್ರಸ್ತುತ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಈ ಸೇವೆಯನ್ನು ಆರಂಭಿಸುತ್ತಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಉಳಿದ ನಗರಗಳಿಗೆ ಸಹ ಇದನ್ನು ವಿಸ್ತರಣೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.
ಭಾರತೀಯ ರೈಲ್ವೆ ಪಾರ್ಸೆಲ್ ರೈಲುಗಳು ಪ್ರಯಾಣಿಕರ ರೈಲುಗಳಿಗಿಂತ ವೇಗವಾಗಿ ಸಂಚಾರ ನಡೆಸುತ್ತವೆ. ಕೋವಿಡ್ ಸಂದರ್ಭದಲ್ಲಿ ಪಾರ್ಸೆಲ್ ರೈಲುಗಳಿಗೆ ಭಾರೀ ಬೇಡಿಕೆ ಇತ್ತು. ವಾಹನ ಸೇರಿದಂತೆ ಇತರ ಉತ್ಪನ್ನಗಳನ್ನು ರೈಲು ಸಾಗಾಟ ಮಾಡಿತ್ತು.
ಔಷಧಿ, ವೈದ್ಯಕೀಯ ಉಪಕರಣ, ಆಹಾರ ಸಾಮಾಗ್ರಿಗಳನ್ನು ವಿಶೇಷ ರೈಲುಗಳ ಮೂಲಕ ಸಾಗಾಟ ಮಾಡಿ ರೈಲ್ವೆ ಲಾಭವನ್ನು ಸಹಗಳಿಸಿತ್ತು. ಈಗ ಇದೇ ಮಾದರಿಯಲ್ಲಿ ಪಾರ್ಸೆಲ್ ಸೇವೆಗೆ ಆದ್ಯತೆ ನೀಡಲಾಗಿದೆ.
ಪಾರ್ಸೆಲ್ ಸೇವೆಗೆ ಆದ್ಯತೆ; ಭಾರತೀಯ ರೈಲ್ವೆ ಪಾರ್ಸೆಲ್ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದೆ. 2022-23ನೇ ಸಾಲಿನ ಬಜೆಟ್‌ನಲ್ಲಿ 'ಪಿಎಂ ಗತಿಶಕ್ತಿ' ಯೋಜನೆ ಘೋಷಣೆ ಮಾಡಲಾಗಿದೆ. ಇದರ ಅಡಿ ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23 ರಲ್ಲಿ 25,000 ಕಿ. ಮೀ.ಗೆ ವಿಸ್ತರಿಸಲಾಗುತ್ತದೆ.
ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ಒಂದು ನಿಲ್ದಾಣ ಒಂದು ಉತ್ಪನ್ನದ ಪರಿಕಲ್ಪನೆಯಲ್ಲಿ ರೈಲು ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತದೆ.
2022-23 ರಲ್ಲಿ ದೇಶೀಯ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಸಾಮರ್ಥ್ಯ ವರ್ಧನೆಗಾಗಿ 2000 ಕಿ. ಮೀ. ರೈಲ್ವೆ ಜಾಲವನ್ನು 'ಕವಚ್' ಅಡಿಯಲ್ಲಿ ತರಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ರೈಲ್ವೇಯು ಪಾರ್ಸೆಲ್ ಸೇವೆಗಳನ್ನು ಇನ್ನಷ್ಟು ಜನಸ್ನೇಹಿಯಾಗಿ ಮಾಡುತ್ತಿದೆ. ಇದರ ಅಂಗವಾಗಿ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಸಹ ಸೇವೆಗಳನ್ನು ನೀಡಲು ಯೋಜನೆ ರೂಪಿಸಿದೆ. ದೊಡ್ಡ ನಗರಗಳು ಮತ್ತು ಉತ್ಪಾದನಾ ಕೇಂದ್ರಗಳಿಂದ ಅಗ್ಗದ ದರದಲ್ಲಿ ಸಣ್ಣ ನಗರಗಳಿಗೆ ಪಾರ್ಸೆಲ್ ತಲುಪಿಸುವ ಉದ್ದೇಶವನ್ನು ಹೊಂದಿದೆ.
ಕೈಗಾರಿಕೆ ಉತ್ಪನ್ನಗಳು ಮಾತ್ರವಲ್ಲ. ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ದ್ವಿಚಕ್ರ ವಾಹನಗಳು ಇತ್ಯಾದಿಗಳ ಸಾಗಣೆಗೆ ಸಹ ಅವಕಾಶ ನೀಡಲಾಗಿದೆ. ಪಾರ್ಸೆಲ್ ಸೇವೆಗಳಿಂದ ಉತ್ತಮ ಆದಾಯ ಸಹ ಇಲಾಖೆಗೆ ಇದೆ.
ಪಾರ್ಸೆಲ್ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲು ನಿರ್ವಹಣಾ ವ್ಯವಸ್ಥೆಯನ್ನು ಗಣಕೀಕರಣಗೊಳಿಸಲಾಗಿದೆ. ಹಂತ ಹಂತವಾಗಿ ಚಿಕ್ಕಪುಟ್ಟ ನಗರಗಳಿಗೆ ವ್ಯವಸ್ಥೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.












Click it and Unblock the Notifications