ರೈತರಿಂದ 'ರೈಲ್ ರೋಕೋ': ಏನಿದು ಪ್ರತಿಭಟನೆ, ಎಲ್ಲೆಲ್ಲಿ ರೈಲು ಸಂಚಾರ ವ್ಯತ್ಯಯ ತಿಳಿಯಿರಿ
ನವದೆಹಲಿ, ಮಾರ್ಚ್ 10: ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಮಾರ್ಚ್ 6 ರಂದು ದೆಹಲಿಯತ್ತ 'ದಿಲ್ಲಿ ಚಲೋ' ಪಾದಯಾತ್ರೆಯನ್ನು ಪುನರಾರಂಭಿಸಿದ್ದಾರೆ. ಇದೇ ವೇಳೆ ಮಾರ್ಚ್ 10ರ ಭಾನುವಾರ ನಾಲ್ಕು ಗಂಟೆಗಳ ಕಾಲ ರಾಷ್ಟ್ರವ್ಯಾಪಿ 'ರೈಲ್ ರೋಕೋ' ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಲು ಮತ್ತೊಂದು ಹೆಜ್ಜೆ ಮುಂದಿಟ್ಟಿವೆ. ಭಾನುವಾರ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ನಡೆಯಲಿರುವ 'ರೈಲ್ ರೋಕೋ' ಪ್ರತಿಭಟನೆ ನಡೆಯಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರ 'ರೈಲ್ ರೋಕೋ' ಪ್ರತಿಭಟನೆಯ ಪ್ರಮುಖ ಅಪ್‌ಡೇಟ್ ಇಲ್ಲಿದೆ
* ರಾಷ್ಟ್ರವ್ಯಾಪಿ 'ರೈಲ್ ರೋಕೋ' ಪ್ರತಿಭಟನೆಯಿಂದಾಗಿ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಸುಮಾರು 60 ಸ್ಥಳಗಳಲ್ಲಿ ನೂರಾರು ರೈತರು ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ರೈಲುಗಳ ಸಂಚಾರದಲ್ಲಿ ಅಡಚಣೆ ಉಂಟಾಗುವ ನಿರೀಕ್ಷೆಯಿದೆ. ಪ್ರತಿಭಟನೆಯ ಸಂದರ್ಭದಲ್ಲಿ, ಫಿರೋಜ್‌ಪುರ, ಅಮೃತಸರ, ರೂಪನಗರ್, ಗುರುದಾಸ್‌ಪುರ ಜಿಲ್ಲೆಗಳು ಸೇರಿದಂತೆ ಪಂಜಾಬ್‌ನ ಹಲವಾರು ಸ್ಥಳಗಳಲ್ಲಿ ನೂರಾರು ರೈತರು ರೈಲು ಹಳಿಗಳ ಮೇಲೆ ಕುಳಿತುಕೊಳ್ಳಲಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್), ಭಾರತಿ ಕಿಸಾನ್ ಯೂನಿಯನ್ (ಡಕೌಂಡ-ಧನೇರ್) ಮತ್ತು ಕ್ರಾಂತಿಕಾರಿ ಕಿಸಾನ್ ಯೂನಿಯನ್ - ರೈತ ಸಂಘಟನೆಗಳು ಕೂಡ 'ರೈಲ್ ರೋಕೋ' ಆಂದೋಲನದಲ್ಲಿ ಭಾಗವಹಿಸಲಿವೆ.
'ರೈಲ್ ರೋಕೋ' ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಲ್ಲಾ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹರಿಯಾಣದ ಅಧಿಕಾರಿಗಳು ಭಾನುವಾರ ಅಂಬಾಲಾ ಜಿಲ್ಲೆಯಲ್ಲಿ ಅನಾಹುತಗಳನ್ನು ತಪ್ಪಿಸಲು ಸೆಕ್ಷನ್ 144 ವಿಧಿಸಿದ್ದಾರೆ. ರಾಜ್ಯದಲ್ಲಿ ಉದ್ವಿಗ್ನ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿಭಟನೆಯು ಇಂಟರ್ ಸಿಟಿ ಮತ್ತು ರಾಜ್ಯ ರೈಲು ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಳೆದ ತಿಂಗಳು, ರೈತರು ಹಳಿಗಳ ಮೇಲೆ ಧರಣಿ ಸತ್ಯಾಗ್ರಹ ನಡೆಸಿದ್ದರಿಂದ ದೆಹಲಿ-ಅಮೃತಸರ ಮಾರ್ಗದಲ್ಲಿ ಹಲವಾರು ರೈಲುಗಳು ತಡವಾಗಿ ಓಡಿದವು. 'ರೈಲ್ ರೋಕೋ'ಪ್ರತಿಭಟನೆಗೆ ಕರೆ ನೀಡಿರುವ ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರು, ತಮ್ಮ ಬೇಡಿಕೆಗಳನ್ನು ಕೇಂದ್ರವು ಈಡೇರಿಸುವವರೆಗೆ ರೈತರು ಪ್ರತಿಭಟನಾ ಸ್ಥಳಗಳಲ್ಲಿ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು
ದೇಶದ ರೈತರನ್ನು ಉಳಿಸಲು ಎಂಎಸ್‌ಪಿ ಕಾನೂನನ್ನು ಜಾರಿಗೊಳಿಸಬೇಕು. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. C2 ಪ್ಲಸ್ 50 ಪ್ರತಿಶತ ಸೂತ್ರದ ಅಡಿಯಲ್ಲಿ ರೈತರ ಉಳಿವಿಗಾಗಿ ಎಲ್ಲಾ ಬೆಳೆಗಳಿಗೆ MSP ನೀಡಬೇಕು ಎಂದು ರೈತ ನಾಯಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫೆಬ್ರವರಿ 13 ರಂದು ರೈತರ ಪ್ರತಿಭಟನೆಯು 'ದೆಹಲಿ ಚಲೋ' ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ರಾಷ್ಟ್ರ ರಾಜಧಾನಿಯತ್ತ ಪಾದಯಾತ್ರೆ ಆರಂಭಿಸಿದವು.
ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ?
ಪ್ರತಿಭಟನಾನಿರತ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈಗ ರದ್ದು ಮಾಡಿರುವ ಕೃಷಿ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ಅವರು ಒಪ್ಪಿಕೊಂಡಾಗ ಅವರು 2021 ರಲ್ಲಿ ನಿಗದಿಪಡಿಸಿದ ಷರತ್ತು ಈ ಎಂಎಸ್‌ಪಿ ಕಾನೂನು ಜಾರಿ. ಆದರೆ ಮೂರು ವರ್ಷವಾದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ.
ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಮಾಡಬೇಕು. ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ಮತ್ತು 2021 ರ ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ, ಭೂ ಸ್ವಾಧೀನ ಕಾಯಿದೆ 2013 ರ ಮರುಸ್ಥಾಪನೆ ಮತ್ತು 2020-21ರ ಹಿಂದಿನ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ ಅವರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications