ಮಧ್ಯಪ್ರದೇಶ : ಬಿಜೆಪಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ
ಮಧ್ಯಪ್ರದೇಶ, ಅ.17 : ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ವಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಯುವಕರು, ಮಹಿಳೆಯರು ಮತ್ತು ಆದಿವಾಸಿಗಳಿಗೆ ಅವಕಾಶ ದೊರೆಯಬೇಕು ಎಂದು ಹೇಳಿದ್ದಾರೆ.
ಗುರುವಾರ ರಾಹುಲ್ ಗಾಂಧಿ ಮಧ್ಯಪ್ರದೇಶದ ಶಹದೂಲ್ ಮತ್ತು ಗ್ವಾಲಿಯರ್ ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮಧ್ಯಪ್ರದೇಶದ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಿಜೆಪಿ ಪಕ್ಷ ಹೇಳುವ ಅಭಿವೃದ್ಧಿ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಧಾರಣ ವ್ಯಕ್ತಿಗಳು, ದಲಿತರು, ಪರಿಶಿಷ್ಟರು ಬೇಕಾಗಿಲ್ಲ, ಇಂಥವರು ಹವಾನಿಯಂತ್ರಿತ ಕೊಠಡಿಗಳಿಗೆ ಪ್ರವೇಶಿಸಬಾರದು ಎಂದು ವಿಪಕ್ಷಗಳು ಬಯಸುತ್ತಿವೆ ಎಂದು ರಾಹುಲ್ ಗಾಂಧಿ ದೂರಿದರು.
ರಾಜ್ಯದ ಮುಖ್ಯಮಂತ್ರಿಗಳು ವಿದ್ಯುತ್ ಸ್ಥಾವರಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಅದಕ್ಕಾಗಿ ರೈತರ ಭೂಮಿ ಕಸಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯುವಜನಾಂಗಕ್ಕೆ ಉದ್ಯೋಗ ದೊರೆಯಬೇಕು, ಬಡವರಿಗೆ ಗೌರವ ದೊರೆಯಬೇಕು, ಮಹಿಳೆಯರಿಗೆ ರಕ್ಷಣೆ ದೊರೆಯಬೇಕು, ಇದಕ್ಕಾಗಿ ಜನರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.(ಮಧ್ಯಪ್ರದೇಶ ಚುನಾವಣಾ ವೇಳಾಪಟ್ಟಿ)
ಕೇಂದ್ರದಲ್ಲಿ ಅಧಿಕಾರ ನಡೆಸಿದ ಎನ್‌ಡಿಎ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ 2,650 ಕಿ.ಮೀ ರಸ್ತೆಗಳನ್ನು ನಿರ್ಮಾಣ ಮಾಡಿದೆ. ಆದರೆ, ಒಂಭತ್ತು ವರ್ಷಗಳಲ್ಲಿ 9,750 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ.
ಇಂತಹ ಅಂಕಿ-ಅಂಶಗಳು ಜನರ ಮುಂದಿವೆ. ಪ್ರತಿಪಕ್ಷ ಬಿಜೆಪಿ ಮಾತನಾಡುತ್ತಿರುವ ಅಭಿವೃದ್ಧಿ ವಿಚಾರ ಯಾವುದು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ವಿಪಕ್ಷಗಳು ಅಭಿವೃದ್ಧಿ ಎಂದರೆ, ರಸ್ತೆ ನಿರ್ಮಾಣ ಮಾಡುವುದು ಎಂದು ತಿಳಿದು ಕೊಂಡಿವೆ ಎಂದು ರಾಹುಲ್ ಹೇಳಿದರು.
ಅಮ್ಮ ಕಣ್ಣೀರಿಟ್ಟಿದ್ದರು : ಸಂಸತ್‌ನಲ್ಲಿ ಆಹಾರ ಭದ್ರತೆ ಮಸೂದೆ ಜಾರಿಯಾಗುವ ವೇಳೆ ಅಲ್ಲಿರಲು ಸಾಧ್ಯವಾಗಿಲ್ಲವಲ್ಲ ಎಂದು ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆಹಾರ ಭದ್ರತೆ ಮಸೂದೆ ಚರ್ಚೆ ನಡೆಯುವಾಗ ಅಮ್ಮನಿಗೆ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಿಸಿದೆವು. ಅವರು ಉಸಿರಾಡುವುದೂ ಕಷ್ಟವಾಗಿತ್ತು. ಆಗಲೂ ಅವರು ಆಹಾರ ಭದ್ರತೆ ಮಸೂದೆಗೆ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಯೋಚಿಸುತ್ತಿದ್ದರು ಎಂದರು.












Click it and Unblock the Notifications