Rahul Gandhi: ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ವೇಳೆ ರಾಹುಲ್ ಗಾಂಧಿ ಮಾಡಿದ್ದೇನು? ವಿಡಿಯೋ ವೈರಲ್
ನವದೆಹಲಿ, ಡಿಸೆಂಬರ್ 29: ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್( 92 ವರ್ಷ) ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗುರುವಾರ ಸಂಜೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶನಿವಾರ(ಡಿ.28,2024) ಅಂತಿಮ ವಿದಾಯ ಹೇಳಲಾಯಿತು. ಶನಿವಾರದಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ ಘಾಟ್ ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ಅಂತ್ಯಕ್ರಿಯೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ , ರಾಹುಲ್ ಗಾಂಧಿ ಸೇರಿದಂತೆ ಅನೇಕ ದೊಡ್ಡ ನಾಯಕರು ಅಲ್ಲಿದ್ದರು.

ಮನಮೋಹನ್ ಸಿಂಗ್ ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಂಬಾ ಭಾವುಕರಾಗಿ ಕಾಣುತ್ತಿದ್ದರು. ಆಗಾಗ ಕಣ್ಣೀರು ಒರೆಸಿಕೊಳ್ಳುವುದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗಾಂಧಿ ಕುಟುಂಬ ಎಷ್ಟೊಂದು ಪ್ರೀತಿಸುತ್ತಿದ್ದರು ಎಂಬುದು ರಾಹುಲ್ ಗಾಂಧಿ ಅವರ ದುಃಖದ ಕಣ್ಣೀರಲ್ಲೇ ಗೋಚರಿಸಿದೆ. ರಾಹುಲ್ ಗಾಂಧಿ ಕಣ್ಣೀರು ಹಾಕುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿಯವರದು ಮಗವಿನಂಥ ಮನಸಿನವರು. ಆಪ್ತರು, ಪ್ರೀತಿಪಾತ್ರರ ಅಗಲಿಕೆ ತಡೆಯದೇ ಕಣ್ಣೀರು ಹಾಕುತ್ತಿದ್ದಾರೆ ಎಂದು ನೆಟ್ಟಿಗರು ಸಹ ದುಃಖ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ವೇಳೆ ಕೊರೆಯುವ ಚಳಿಯಲ್ಲೂ ಬೆಚ್ಚಗಿನ ಉಡುಪುಗಳಿಲ್ಲದೆ ಟ್ರಕ್‌ನಲ್ಲಿ ರಾಹುಲ್ ಗಾಂಧಿ ಕುಳಿತಿದ್ದರು. ಒಂದು ಕಡೆ ಶವಸಂಸ್ಕಾರದ ವೇಳೆ ಬಂದಿದ್ದ ಜನರೆಲ್ಲರೂ ಜಾಕೆಟ್, ಸ್ವೇಟರ್ ಉಣ್ಣೆಯ ಬಟ್ಟೆ ಧರಿಸಿದ್ದರೆ, ಮತ್ತೊಂದೆಡೆ ರಾಹುಲ್ ಗಾಂಧಿ ಟೀ ಶರ್ಟ್ ಧರಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತಿದೆ. ಇನ್ನೂ ಹವಾಮಾನ ವೈಪ್ಯರೀತ್ಯದಿಂದ ಮಳೆ ಸುರಿದ ಪರಿಣಾಮ ದೆಹಲಿಯಲ್ಲಿ ಏಕಾಏಕಿ ಚಳಿ ತೀವ್ರ ಹೆಚ್ಚಳವಾಗಿ ತಾಪಮಾನ ಕಡಿಮೆಯಾಗಿದೆ. ಆದರೆ ಕೊರೆಯುವ ಚಳಿ ನಡುವೆಯೂ ಸ್ವೆಟರ್, ಉಣ್ಣೆಬಟ್ಟೆ ಯಾವುದೇ ಬೆಚ್ಚನೆಯ ಉಡುಪು ಧರಿಸದೇ ಬಿಳಿ ಟಿಶರ್ಟ್ ಧರಿಸಿ ತುಂಬಾ ದುಃಖಿತರಾದಂತೆ ರಾಹುಲ್ ಗಾಂಧಿ ಅವರು ವಿಡಿಯೋದಲ್ಲಿ ಕಾಣಿಸಿದೆ.
ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ
ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಗರಂ ಆಗಿದ್ದಾರೆ. ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿದ ಬಳಿಕ ಕೆರಳಿ ಕೆಂಡವಾದ ರಾಹುಲ್ ಗಾಂಧಿ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಪ್ರಸ್ತುತ ಸರ್ಕಾರ ಅವರಿಗೆ ಸಂಪೂರ್ಣ ಅವಮಾನ ಮಾಡಿದೆ. ಮನಮೋಹನ್ ಸಿಂಗ್ ಒಂದು ದಶಕದ ಕಾಲ ಭಾರತದ ಪ್ರಧಾನಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶವು ಆರ್ಥಿಕ ಮಹಾಶಕ್ತಿಯಾಯಿತು ಮತ್ತು ಅವರ ನೀತಿಗಳು ಇನ್ನೂ ದೇಶದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿವೆ.
ಇಲ್ಲಿಯವರೆಗೆ, ಎಲ್ಲಾ ಮಾಜಿ ಪ್ರಧಾನಿಗಳ ಘನತೆಯನ್ನು ಗೌರವಿಸಿ, ಅವರ ಅಂತಿಮ ವಿಧಿಗಳನ್ನು ಅಧಿಕೃತ ಸಮಾಧಿಗಳಲ್ಲಿ ನಡೆಸಲಾಯಿತು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಅನಾನುಕೂಲತೆ ಇಲ್ಲದೇ ಗೌರವ ಸಲ್ಲಿಸಬದಾಗಿದೆ. ಹಾಗೆಯೇ ದೇಶದ ಈ ಮಹಾನ್ ಪುತ್ರ ಮತ್ತು ಅವರ ಸಮುದಾಯದ ಬಗ್ಗೆ ಸರ್ಕಾರ ಗೌರವ ತೋರಿಸಬೇಕಿತ್ತು. ಆದರೆ ಸಂಪೂರ್ಣ ಅಪಮಾನ ಮಾಡಿದೆ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಅವರು ಬರೆದುಕೊಂಡಿದ್ದಾರೆ.












Click it and Unblock the Notifications