Rahul Gandhi–DKS Row: ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ; ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ: ಸಿಎಂ ಡಿಕೆಶಿ
ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಲಿಲ್ಲ; ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಆಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. "ದೆಹಲಿಯಲ್ಲಿ ನಡೆದ ಎಸ್ ಐಆರ್ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಲಿಲ್ಲ. ಪ್ರತಿಭಟನಾಕಾರರು ಹೆಚ್ಚಾಗಿದ್ದರಿಂದ ಹಿಂದೆ ಬರುತ್ತಿದ್ದ ವಾಹನದಲ್ಲಿ ಹತ್ತುವಂತೆ ಸಲಹೆ ನೀಡಿ ನನ್ನ ಬಗ್ಗೆ ಕಾಳಜಿ ತೋರಿದರು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಚಲೋ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ನಿಮ್ಮನ್ನು ತಳ್ಳಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, "ಪ್ರತಿಭಟನೆಯಲ್ಲಿ ಯಾರೂ ಕೂಡ ನನ್ನನ್ನು ತಳ್ಳಲಿಲ್ಲ. ಜನಸಂದಣಿ ಜಾಸ್ತಿ ಇತ್ತು. ಬಿಜೆಪಿ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಹಾಗಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳನ್ನು ಬದಿಗೆ ತಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ: ಆರ್. ಅಶೋಕ್
ಮುಖ್ಯಮಂತ್ರಿಗಳನ್ನು ಬದಿಗೆ ತಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ಏಳೂವರೆ ಕೋಟಿ ಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡ ರೀತಿ ಅತ್ಯಂತ ಖಂಡನೀಯ! ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚು ಕಾರ್ಯಕರ್ತರು ಬರುತ್ತಾರೆ ಎಂದು ಗೊತ್ತಿದ್ದರೂ ಮುಖ್ಯಮಂತ್ರಿಗಳಿಗೆ ಸೂಕ್ತವಾದ ಭದ್ರತೆಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತ್ರ ತಮಗೆ ಭದ್ರತೆ ಒದಗಿಸಿಕೊಂಡು ಮುಖ್ಯಮಂತ್ರಿಗಳನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಎಂಬ ಎಚ್ಚರಿಕೆಯೇ ಇಲ್ಲದ ಅವರೊಂದಿಗೆ ನಿಕೃಷ್ಟವಾಗಿ ನಡೆದುಕೊಂಡು ತಳ್ಳಾಡಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಇಷ್ಟೆಲ್ಲ ಆಗುವಾಗ ನಿಮ್ಮ ಇಲಾಖೆ ನಿದ್ರೆ ಮಾಡುತ್ತಿತ್ತೇ? ಮುಖ್ಯಮಂತ್ರಿಗಳು ಎಲ್ಲೇ ಹೋದರೂ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಭದ್ರತಾ ಸಿಬ್ಬಂದಿಯ ಕರ್ತವ್ಯವಲ್ಲವೇ? ಕಾಂಗ್ರೆಸ್ ಹೈಕಮಾಂಡ್, ನಮ್ಮ ರಾಜ್ಯದ ನಾಯಕರನ್ನು ಇಷ್ಟು ಕೀಳಾಗಿ ಕಂಡರೂ ಪ್ರಶ್ನೆ ಮಾಡುವ ತಾಕತ್ತಿಲ್ಲವೇ ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ರಾಜಕೀಯ ಏನೇ ಇರಲಿ, ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಳ್ಳುವುದನ್ನು ಯಾರೂ ಒಪ್ಪುವುದಿಲ್ಲ. ಪ್ರತಿ ಬಾರಿಯೂ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಖ್ಯಮಂತ್ರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಇತಿಹಾಸದಲ್ಲೇ ಸಾಬೀತಾಗಿದೆ. ರಾಜ್ಯದ ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಳ್ಳುವುದೇ ಕಾಂಗ್ರೆಸ್ ನ ಸಂಸ್ಕೃತಿ ಎಂಬುದು ದಿಟವಾಗಿದೆ. ಈ ಕುರಿತು ತನಿಖೆ ನಡೆಸಿ, ಭದ್ರತೆ ಒದಗಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ. ರಾಜ್ಯದ ಗೃಹ ಸಚಿವರು ಹೊಣೆಗಾರಿಕೆ ಹೊತ್ತು ಜನರ ಕ್ಷಮೆ ಯಾಚಿಸಲಿ.
ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮರ್ಯಾದೆ ಕೊಡದ ಹೈಕಮಾಂಡ್‌ಗೆ ಇನ್ನಾದರೂ ಬುದ್ಧಿ ಬರಲಿ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.


Click it and Unblock the Notifications
