ಅನಿಲ್ ಅಂಬಾನಿ ಜೊತೆ ಕಾಂಗ್ರೆಸ್ ಹಿರಿಯ ಮುಖಂಡನ ಅಂದರ್ ಬಾಹರ್
ನವದೆಹಲಿ, ಫೆ 13: ರಫೇಲ್ ಯುದ್ದವಿಮಾನ ಖರೀದಿಯಲ್ಲಿ ಭಾರತದ ರಕ್ಷಣಾ ಇಲಾಖೆ ಮತ್ತು ನಮ್ಮ ಯೋಧರು ತಲೆತಗ್ಗಿಸುವಂತೆ ಮೋದಿ ಸರಕಾರ ಮಾಡಿದೆ ಎಂದು ಕಳೆದ ಕೆಲವು ತಿಂಗಳಿನಿಂದ ಹೋರಾಟ, ಟೀಕೆ ಮಾಡುತ್ತಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಜುಗರವಾಗುವ ವಿಷಯವೊಂದು ಹೊರಬಿದ್ದಿದೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡ, ಸಂಸದ ಜೊತೆಗೆ ವೃತ್ತಿಯಲ್ಲಿ ವಕೀಲರೂ ಆಗಿರುವ ಕಪಿಲ್ ಸಿಬಲ್, ವಾಣಿಜ್ಯೋದ್ಯಮಿ ಅನಿಲ್ ಅಂಬಾನಿ ಪರ ವಕಾಲತ್ತು ವಹಿಸಿದ್ದಾರೆ. ರಫೇಲ್, ಮೋದಿ, ಅನಿಲ್ ಅಂಬಾನಿ ಎನ್ನುವ ಮೂರು ಹೆಸರನ್ನು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರು, ಅದರಲ್ಲೂ ಪ್ರಮುಖವಾಗಿ ಎಐಸಿಸಿ ಅಧಕ್ಷ ರಾಹುಲ್ ಗಾಂಧಿ ನೆನಪಿಸಿಕೊಳ್ಳದ ದಿನವಿಲ್ಲ.
ಚೌಕೀದಾರ್ ಚೋರ್ ಹೇ, ಮೋದಿ 'ಅಂಬಾನಿಯ ಮಿಡ್ಲ್ ಮ್ಯಾನ್' ಎಂದೆಲ್ಲಾ ಲೇವಡಿ ಮಾಡುತ್ತಿದ್ದ ರಾಹುಲ್ ಗಾಂಧಿಗೆ, ತಮ್ಮ ಪಕ್ಷದ ಮುಖಂಡರೊಬ್ಬರು ಅನಿಲ್ ಅಂಬಾನಿ ಪರ ವಾದ ಮಾಡುತ್ತಿದ್ದಾರೆ ಎನ್ನುವ ಸತ್ಯವನ್ನು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಎರಿಕ್ಸನ್ ಇಂಡಿಯಾ ಸಂಸ್ಥೆ ರಿಲಯನ್ಸ್ ಸಂಸ್ಥೆಯ ಅನಿಲ್ ಅಂಬಾನಿ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ವಕೀಲರೂ ಕೂಡ ಆಗಿರುವ ಕಪಿಲ್ ಸಿಬಲ್, ಅನಿಲ್ ಅಂಬಾನಿ ಪರ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದಾರೆ.
ಇದರೆ ಜೊತೆ ಜೊತೆಗೆ, ರಫೇಲ್ ಯುದ್ದ ವಿಮಾನ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅನಿಲ್ ಅಂಬಾನಿ ವಿರುದ್ಧ ಮಾಡಿರುವ ಗಂಭೀರ ಆರೋಪವನ್ನು ಬೆಂಬಲಿಸಿ ಅನಿಲ್ ಅಂಬಾನಿ ಹೆಸರನ್ನು ಬಳಸಿ ಕೇಂದ್ರ ಸರಕಾರದ ವಿರುದ್ಧವೂ ಹರಿಹಾಯುತ್ತಿದ್ದಾರೆ.
ರಫೇಲ್ ಮತ್ತು ಎರಿಕ್ಸನ್ ಕೇಸುಗಳು ಬೇರೆ ಬೇರೆಯಾಗಿದ್ದರೂ, ಕಪಿಲ್ ಸಿಬಲ್ ಅವರದ್ದು ಈ ನಡೆ 'ಅಂದರ್ ಬಾಹರ್' ಆಟದ ರೀತಿಯಲ್ಲಿ ಒಳಗೊಂದು, ಹೊರಗೊಂದು ಎಂದು ಸಾಮಾಜಿಕ ತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.












Click it and Unblock the Notifications