ಮಧ್ಯ ಪ್ರದೇಶದಲ್ಲಿ ರಾಹುಲ್: ಮೋದಿ, ಅಂಬಾನಿ ಮೇಲೆ ವಾಗ್ದಾಳಿ
ಮೊರೆನಾ (ಮಧ್ಯಪ್ರದೇಶ), ಅಕ್ಟೋಬರ್ 06: ಮುಂದಿನ ತಿಂಗಳ ಅಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರು ಅನಧಿಕೃತವಾಗಿ ಇಂದು ಅಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಮಧ್ಯ ಪ್ರದೇಶದ ಮೊರೆನಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರ ಆಡಳಿತ ಹಾಗೂ ರಾಜ್ಯದ ಬಿಜೆಪಿ ಆಡಳಿತದ ಜೊತೆ-ಜೊತೆಗೆ ಅಂಬಾನಿಗಳ ಮೇಲೆ ತಮ್ಮ ವಾಗ್ಝರಿ ಹರಿಬಿಟ್ಟರು. ಸಮಾವೇಶದ ನಂತರ ರಾಹುಲ್ ಅವರು ಜಬಲ್‌ಪುರದಲ್ಲಿ ಭಾರಿ ರೋಡ್ ಶೋ ನಡೆಸಿದರು. ಜೊತೆಗೆ ಅಲ್ಲಿನ ಕಮಲ್ ನಾಥ ದೇವಸ್ಥಾನಕ್ಕೆ ತೆರಳಿ ದೇವರಿಗೆ ಆರತಿ ಮಾಡಿದರು.
ಮದ್ಯ ಪ್ರದೇಶದ ಆಡಿತಾರೂಢ ಬಿಜೆಪಿ ಸರ್ಕಾರ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ ಈ ಸರ್ಕಾರ ರೈತರನ್ನು, ಬಡವರನ್ನು ಮರೆತಿದೆ ಎಂದು ದೂರಿದರು.
ಮಾಮೂಲಿನಂತೆ ರಫೆಲ್ ಒಪ್ಪಂದದ ಬಗ್ಗೆ ಉಲ್ಲೇಖ ಮಾಡಿದ ರಾಹುಲ್ ಗಾಂಧಿ ಮೋದಿ ಸರ್ಕಾರವು ಭಾರತದ ಯುವಜನರಿಗೆ ಸೇರಬೇಕಿದ್ದ ಉದ್ಯೋಗವನ್ನು ಕಿತ್ತುಕೊಂಡಿದೆ. ಜನರಿಗೆ ಸೇರಬೇಕಾದ ಹಣವನ್ನು ಕಿತ್ತುಕೊಂಡು ಅಂಬಾನಿಗಳ ಜೇಬಿಗೆ ಇಟ್ಟಿದೆ ಎಂದು ಹೇಳಿದರು.

ಬುಡಕಟ್ಟು ಹಕ್ಕು ಕಾಯ್ದೆ ಜಾರಿಗೆ ತರುತ್ತೇವೆ
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂಬ ಬಗ್ಗೆಯೂ ಭರವಸೆಗಳನ್ನು ನೀಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬುಡಕಟ್ಟು ಹಕ್ಕುಗಳ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಘೋಷಿಸಿದರು.

ಶ್ರೀಮಂತರ ಸಾಲ ಮಾತ್ರ ಮನ್ನಾ ಏಕೆ?
ಶ್ರೀಮಂತರ ಮೂರು ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ ಅದೇ ರಿಯಾಯಿತಿಯನ್ನು ಬಡವರ ಹಾಗೂ ರೈತರ ಮೇಲೆ ಏಕೆ ತೋರಿಸುವುದಿಲ್ಲ ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಭೂ ಒತ್ತುವರಿ ಕಾಯ್ದೆ ದುರ್ಬಲ ಮಾಡಿದ್ದಾರೆ
ಮೋದಿ ಸರ್ಕಾರ ಭೂ ಒತ್ತುವರಿ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ ರಾಹುಲ್, ಯುಪಿಎಯು ರೈತರ ಅನುಮತಿ ಕೇಳಿ ಭೂ ಒತ್ತುವರಿ ಮಾಡಿಕೊಂಡಿತ್ತು ಎಂದರು.

ನಾನು ಎಂದೂ ಸುಳ್ಳು ಭರವಸೆ ಕೊಟ್ಟಿಲ್ಲ
2004ರಿಂದ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ ಆದರೆ ಈ ವರೆಗೆ ಮೋದಿಯಂತೆ ಸುಳ್ಳು ಭರವಸೆ ನೀಡಿಲ್ಲ. ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದೆ. ಮೈತ್ರಿ ಸರ್ಕಾರ ರಚನೆ ಆದರೂ ಸಹ ರೈತರ ಪೂರ್ಣ ಸಾಲಮನ್ನಾ ಮಾಡಿದ್ದೇವೆ ಎಂದು ಅವರು ಹೇಳಿದರು.

ಮಲ್ಯ ಹಣಕಾಸು ಸಚಿವರಿಗೆ ಹೇಳಿಯೇ ದೇಶಬಿಟ್ಟಿದ್ದಾನೆ
ಇವರ ಅಧಿಕಾರಾವಧಿಯಲ್ಲಿ ನೀರವ್ ಮೋದಿ 35000 ಕೋಟಿ ತೆಗೆದುಕೊಂಡು ಓಡಿ ಹೋಗುತ್ತಾರೆ. ವಿಜಯ್ ಮಲ್ಯ ಸಹ 10000 ಕೋಟಿ ಸಾಲ ಮಾಡಿ ಓಡಿ ಹೋಗುತ್ತಾರೆ ಅದೂ ಸಹ ಹೋಗಬೇಕಾದರೆ ಹಣಕಾಸು ಮಂತ್ರಿ ಅವರ ಒಪ್ಪಿಗೆ ಪಡೆದು ಹೋಗುತ್ತಾರೆ ಹಾಗಾದರೆ ಇವರು ಸರ್ಕಾರ ನಡೆಸುತ್ತಿದ್ದಾರಾ ಅಥವಾ ಕಳ್ಳರಿಗೆ ಸಹಾಯ ಮಾಡುತ್ತಿದ್ದಾರಾ ಎಂದು ರಾಹುಲ್ ಪ್ರಶ್ನಿಸಿದರು.












Click it and Unblock the Notifications