ಪುದುಚೇರಿಯಲ್ಲಿ ಸರ್ಕಾರಕ್ಕೆ ಎದುರಾದ ಪತನದ ಭೀತಿ!
ಪುದುಚೇರಿ, ಫೆಬ್ರವರಿ.16: ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರವು ಬಹುಮತವನ್ನು ಕಳೆದುಕೊಂಡಿದ್ದು ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ರಂಗಸ್ವಾಮಿ ಬುಧವಾರ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಇಬ್ಬರು ಸಚಿವರು ಮತ್ತು ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿದ ನಂತರವೂ ಮುಖ್ಯಮಂತ್ರಿ ನಾರಾಯಣಸ್ವಾಮಿಯವರು ಅಧಿಕಾರವನ್ನು ಆಸ್ವಾದಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಒಟ್ಟು 28 ಶಾಸಕರಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ 14 ಶಾಸಕರ ಬೆಂಬಲವಿದ್ದು, ವಿರೋಧ ಪಕ್ಷದಲ್ಲಿಯೂ ಬಿಜೆಪಿಯ ಮೂವರು ನಾಮನಿರ್ದೇಶಕ ಸದಸ್ಯರು ಸೇರಿದಂತೆ 14 ಮಂದಿ ಸದಸ್ಯರ ಬೆಂಬಲವಿದೆ. ಈ ಹಿನ್ನೆಲೆ ಅಲ್ಪಮತಕ್ಕೆ ಕುಸಿದ ಸರ್ಕಾರದ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸಲಿ ಎಂದು ವಿರೋಧ ಪಕ್ಷದ ನಾಯಕ ರಂಗಸ್ವಾಮಿ ಹೇಳಿದ್ದಾರೆ.

ಮೈತ್ರಿ ಸರ್ಕಾರ ಉರುಳಲು ಬಿಡುವುದಿಲ್ಲ
ಪುದುಚೇರಿಯಲ್ಲಿ ಸರ್ಕಾರಕ್ಕೆ ಅಗತ್ಯವಿರುವ ಸದಸ್ಯ ಬಲವಿದೆ ಎಂದು ಉಪ ಮುಖ್ಯಮಂತ್ರಿ ಎಂ ಎನ್ ಆರ್ ಬಾಲನ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಕ್ಕೆ ಸರ್ಕಾರವು ಸಿದ್ಧವಿದೆ. ಸರ್ಕಾರ ಪತನವಾಗುವುದಕ್ಕೆ ಬಯಸದ ಕೆಲವು ಪ್ರತಿಪಕ್ಷದ ನಾಯಕರು ವಿಧಾನಸಭೆಯಲ್ಲಿ ಸರ್ಕಾರಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ಶಾಸಕ ಮಲ್ಲಾಡಿ ಕೃಷ್ಣ ರಾವ್ ರಾಜೀನಾಮೆ
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಶಾಸಕ ಮಲ್ಲಾಡಿ ಕೃಷ್ಣ ರಾವ್ ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ವಿ. ನರಸಿಂಹಸ್ವಾಮಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಇವರು, ಇತ್ತೀಚಿಗಷ್ಟೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಸೋಮವಾರ ವಿಧಾನಸಭಾ ಸಭಾಪತಿ ಸಿವಕ್ ಲೌಂಥು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಮಲ್ಲಾಡಿ ಕೃಷ್ಣ ರಾವ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಲ್ಲಾಡಿ ಕೃಷ್ಣ ರಾವ್ ಅವರಿಗೆ ನೇರವಾಗಿ ಯಾವುದೇ ರೀತಿ ರಾಜೀನಾಮೆ ಪತ್ರವನ್ನು ನೀಡಿಲ್ಲ. ಪೋಸ್ಟ್ ಮೂಲಕ ರಾಜೀನಾಮೆ ಪತ್ರ ಕಳುಹಿಸಲಾಗಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಆರ್. ಮೌನಿಸ್ವಾಮಿ ಸ್ಪಷ್ಟನೆ ನೀಡಿದ್ದರು.

ಪುದುಚೇರಿಯಲ್ಲಿ ಸರ್ಕಾರ ಉಳಿಸುವ ಲೆಕ್ಕಾಚಾರ
ಕಾಂಗ್ರೆಸ್ ಶಾಸಕ ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. 30 ಶಾಸಕ ಸ್ಥಾನ ಬಲವಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಸರ್ಕಾರ ರಚಿಸಲಾಗಿತ್ತು. ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯ ಬಲವನ್ನು ಹೊಂದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆ
2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆ ನಂತರದಲ್ಲಿ ಕಾಂಗ್ರೆಸ್ 15 ಶಾಸಕರ ಪೈಕಿ ಜನವರಿ.25ರಂದು ಶಾಸಕ ಎ. ನಮಸ್ಸಿವಾಯಮ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ದಿನ ಮತ್ತೊಬ್ಬ ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ಕೂಡಾ ಶಾಸಕ ಸ್ಥಾನವನ್ನು ತೊರೆದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕಾಂಗ್ರೆಸ್ ಶಾಸಕ ಧನವೇಲುರನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಇದರಿಂದ ಸ್ಪೀಕರ್ ಸೇರಿದಂತೆ 13 ಕಾಂಗ್ರೆಸ್ ಶಾಸಕರಷ್ಟೇ ಇದ್ದು ಸರ್ಕಾರಕ್ಕೆ ಕುತ್ತು ಎದುರಾಗಿತ್ತು. ಪುದುಚೇರಿಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೂವರು ಡಿಎಂಸಿ ಶಾಸಕರು ಪರೋಕ್ಷ ಬೆಂಬಲ ಸೂಚಿಸಿದರು. ಆರ್. ಸಿವಾ ಮತ್ತು ಎಂ. ಗೀತಾ ಬೆಂಬಲದಿಂದ ಸರ್ಕಾರವು ಸ್ಥಿರವಾಗಿ ಉಳಿಯಿತು.












Click it and Unblock the Notifications