ದೇಶದಲ್ಲಿ ಶಾಂತಿ ಕದಡಲು PFI ಯತ್ನ: ಹಲವೆಡೆ ಎನ್‌ಐಎ ದಾಳಿ
ಬೆಂಗಳೂರು, ಡಿಸೆಂಬರ್ 09: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಕಾರ್ಯಕರ್ತರಿಂದ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ಈ ಕಾರಣಕ್ಕೆ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಕೇರಳ ಹಾಗೂ ಕರ್ನಾಟಕದ ಕಲಬುರಗಿ ಹಲವೆಡೆ ಶೋಧ ನಡೆಸಿದ್ದಾರೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳಿಂದ ನಾಡಿನೆಲ್ಲಡೆ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೇರಳದ ಕೋಝಿಕ್ಕೋಡ್ ಜಿಲ್ಲೆ ಮತ್ತು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೇರಿದಂತೆ ದೇಶದ ಹಲವೆಡೆ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ.
ಶಾಂತಿ ಕದಡುವ ನಿಟ್ಟಿನಲ್ಲಿ ನಿಷೇಧ ಸಂಘಟನೆಯೊಂದು ಕಾರ್ಯಕರ್ತರಿಗೆ ತರಬೇತಿ ನೀಡಲು ಶಿಬಿರಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಮಾಹಿತಿ ಮೇರೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಒಂದಷ್ಟು ಡಿಜಿಟಲ್ ಸಾಕ್ಷ್ಯ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ಕೇರಳ, ತಮಿಳುನಾಡು ಮುಂತಾದೆಡೆ ಭಯೋತ್ಪಾದನಾ ಕೃತ್ಯ ಎಸಗಿಸಲು ನಿಷೇಧಿತ ಸಂಘಟನೆ ಮುಂದಾಗಿದೆ. ಆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಭಾರತ ಮತ್ತು ವಿದೇಶಗಳಿಂದ ಹಣ ಸಂಗ್ರಹಿಸಲು ಯತ್ನಿಸುತ್ತಿದ್ದಾರೆ, ಅದಕ್ಕಾಗಿಯೇ ದಾಳಿ ನಡೆದಿದೆ ಎಂದು ಎನ್‌ಐಎ ತಿಳಿಸಿದೆ.
ಪಿಎಫ್‌ಐ ಸೇರುವಂತೆ ಗೋಡೆ ಬರಹ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಅಂಗಸಂಸ್ಥೆಯಾದ ಸಿಎಫ್ಐ (ಸಿಎಫ್ಐ) ಸೇರುವಂತೆ ಶಿವಮೊಗ್ಗದಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು. ಜಿಲ್ಲೆಯ ಶಿರಾಳಕೊಪ್ಪ ಪಟ್ಟಣದಲ್ಲಿ JOIN CFI ಎಂದು ಗೋಡೆ ಬರಹ ಬರೆಯಲಾಗಿದೆ. ಪಟ್ಟಣದ 9ಕ್ಕೂ ಹೆಚ್ಚು ಕಡೆಗಳಲ್ಲಿ ವಾರದ ಹಿಂದೆ ಪೊಲೀಸರು ಗಸ್ತು ತಿರುಗುವಾಗಿ ಈ ಗೋಡೆ ಬರಹ ಕಂಡು ಬಂದಿದೆ.
ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ. ಕರಾವಳಿಯ ಮಂಗಳೂರಿನಲ್ಲಿ ಸಹ ಕಿಡಿಗೇಡಿಗಳು ಉಗ್ರ ಸಂಘಟನೆಯ ಪರ ಬರಹ ಬರೆದಿದ್ದರು. ಲಷ್ಕರ್ ಉಗ್ರರನ್ನು ಕರೆಸುವುದಾಗಿ ಬೆದರಿಕೆಯ ಬರೆಹದ ಜೊತೆಗೆ ಹ್ಯಾಷ್ ಟ್ಯಾಗ್ ಹಾಕಿದ್ದರು.ಲಷ್ಕರ್ ಜಿಂದಾಬಾದ್ ಎಂದು ಬರೆದಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪಿಎಫ್ಐನ ಅಂಗಸಂಸ್ಥೆ ಸಿಎಫ್ಐ ವಿದ್ಯಾರ್ಥಿ ಸಂಘಟನೆಯಾಗಿದೆ. ಈ ಎಲ್ಲ ಸಂಘಟನೆಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ನಿಷೇಧಿಸಿ ಆದೇಶಿಸಿದೆ.












Click it and Unblock the Notifications