Haryana Assembly Election 2024: 'ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ವಿನಾಯಕನಿಗೇ ವಿಘ್ನ..' ಮೋದಿ ವಾಗ್ದಾಳಿ
ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಬೆಂಗಳೂರಿನಲ್ಲಿ ನಿನ್ನೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ ವೇಳೆ ಗಣೇಶ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ತಮ್ಮ ವಾಹನದಲ್ಲಿಟ್ಟಿದ್ದರು. ಈ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದೇ ವಿಚಾರ ದೂರದ ಹರಿಯಾಣದಲ್ಲೂ ಸದ್ದು ಮಾಡುತ್ತಿದೆ. ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಭಾಷಣ ಮಾಡುವ ವೇಳೆ ಕರ್ನಾಟಕದ ಈ ಘಟನೆ ಉಲ್ಲೇಖಿಸಿದ್ದಾರೆ.
ʼಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಗಣೇಶನನ್ನೂ ಬಂಧಿಸಲಾಗುತ್ತಿದೆ. ಇಡೀ ದೇಶವೇ ಗಣೇಶೋತ್ಸವವನ್ನು ಆಚರಿಸುತ್ತಿದೆ. ಆದರೆ ಕಾಂಗ್ರೆಸ್ ವಿಘ್ನನಿವಾರಕನ ಪೂಜೆಗೂ ವಿಘ್ನವನ್ನುಂಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮೀಸಲಾತಿ ವಿರೋಧಿ ಪಕ್ಷ. ಹಾಗಾಗಿ ಕಾಂಗ್ರೆಸ್ ದಿನಕ್ಕೊಂದು ಹೊಸ ಸುಳ್ಳನ್ನು ಹೇಳುತ್ತಲೇ ಇದೆ. ಈ ರೀತಿ ಸುಳ್ಳುಗಳನ್ನು ಹೇಳಲು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ನಿಂದಾಗಿ ನಮ್ಮ ದೇಶದ ಏಕತೆಗೆ ದಾಳಿ ನಡೆಯುತ್ತಲೇ ಇದೆ. ಕೇವಲ ನಮ್ಮ ಬಿಜೆಪಿಗೆ ಅವಮಾನ ಮಾಡಬೇಕೆನ್ನುವ ಉದ್ದೇಶದಿಂದ ಇಡೀ ದೇಶದ ಮಾನ ಕಳೆಯುವುದಕ್ಕೆ ನಾಚಿಕೆ ಆಗುವುದಿಲ್ಲವೇ? ಇದು ಹಳೆಯ ಕಾಂಗ್ರೆಸ್ ಅಲ್ಲ. ಇಂದಿನ ಕಾಂಗ್ರೆಸ್ ನಗರ ನಕ್ಸಲ್ ಹೊಸ ರೂಪ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸಿರುವ ಜನರು ಸದ್ಯ ಪಶ್ಚಾತಾಪ ಪಡುತ್ತಿದ್ದಾರೆ. ಕಾಂಗ್ರೆಸ್‌ನ ಸುಳ್ಳುಗಳು ಕರ್ನಾಟಕ, ತೆಲಂಗಾಣ ರಾಜ್ಯಗಳನ್ನೂ ಬಿಟ್ಟಿಲ್ಲ. ಕರ್ನಾಟಕದಲ್ಲಿ ಅವ್ಯವಸ್ಥೆ ಹೇಗಿದೆ ಎಂಬುದನ್ನು ನೀವೆಲ್ಲ ನೋಡುತ್ತಿದ್ದೀರಿ. ಭ್ರಷ್ಟಾಚಾರ ಮಿತಿಮೀರಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಕಾಂಗ್ರೆಸ್ ರಾಜ್ಯಗಳಲ್ಲಿ ಬಂಡವಾಳ, ಉದ್ಯೋಗಗಳು ಕೂಡ ಕಡಿಮೆಯಾಗಿವೆ ಎಂದು ದೂರಿದ್ದಾರೆ.

ಹರಿಯಾಣದ ಜನರು ತಮ್ಮ ಬಳಿಗೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟುಕೊಳ್ಳಬಾರದು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ರೈತರ ಯೋಜನೆಗಳನ್ನು ಏಕೆ ಕಾಂಗ್ರೆಸ್ ಜಾರಿಗೆ ತರುವುದಿಲ್ಲ? ಮೊದಲು ಅದನ್ನು ಮಾಡಿ ತೋರಿಸಲಿ ಎಂದು ಕಾಂಗ್ರೆಸ್‌ಗೆ ನಾನು ಸವಾಲು ಹಾಕುತ್ತೇನೆ ಎಂದಿದ್ದಾರೆ.
ಮೋದಿ ಹೇಳಿದ ಘಟನೆ ಏನು?: ನಿನ್ನೆ ಗಣೇಶನ ಮೂರ್ತಿಯು ಕೈದಿಗಳಂತೆ ಪೊಲೀಸರು ವ್ಯಾನ್‌ನಲ್ಲಿರುವ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಕೊನೆಗೆ ಗೊತ್ತಾಗಿದ್ದು, ಇದು ಪ್ರತಿಭಟನಾಕಾರರಿಂದ ವಶಪಡಿಸಿಕೊಂಡಿರುವ ಗಣಪ ಎಂದು. ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಖಂಡಿಸಿ ಬೆಂಗಳೂರಿನಲ್ಲಿ ಕೆಲ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ತಮ್ಮೊಂದಿಗೆ ಗಣೇಶನನ್ನೂ ಪ್ರತಿಭಟನೆಗೆ ಕರೆತಂದಿದ್ದರು. ಪೊಲೀಸರು ಮೊದಲಿಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅವರೊಟ್ಟಿಗಿದ್ದ ಗಣೇಶ ಮೂರ್ತಿಯನ್ನೂ ಎಲ್ಲಿಡುವುದು ಎಂದು ತೋಚದೆ, ಪೊಲೀಸ್ ವ್ಯಾನ್‌ನ ಸೀಟಿನ ಮೇಲೆ ಕೂರಿಸಿಬಿಟ್ಟಿದ್ದಾರೆ. ಇದನ್ನು ಅಲ್ಲಿದ್ದವರು ಫೋಟೋ ಹಿಡಿದು ಶೇರ್ ಮಾಡಿದ್ದು, ವೈರಲ್ ಆಗಿತ್ತು.
ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಈ ಫೋಟೊ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಪಿ.ಸಿ.ಮೋಹನ್, ಕಾಂಗ್ರೆಸ್ ಹಿಂದೂಗಳನ್ನು ಏಕೆ ದ್ವೇಷಿಸುತ್ತದೆ? ಎಂದು ಪ್ರಶ್ನಿಸಿದ್ದರು.
ಬುಧವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಸದ್ಯ ಈ ಘಟನೆಗೆ ರಾಜ್ಯದೆಲ್ಲೆಡೆ ಖಂಡನೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮೊನ್ನೆ ಘಟನೆಯಾದಾಗಲೂ ಕೂಡ ನಾಗಮಂಗಲದ ಗಣೇಶೋತ್ಸವದ ಯುವಕರು ಕಲ್ಲು ತೂರಾಟ ಖಂಡಿಸಿ, ಗಣಪನ ಮೂರ್ತಿ ಠಾಣೆ ಎದುರು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಇದೇ ಘಟನೆಯು ಗಣಪನನ್ನು ಪೊಲೀಸ್ ವ್ಯಾನ್ ಹತ್ತಿಸುವವರೆಗೂ ಕರೆತಂದಿದೆ.












Click it and Unblock the Notifications