Breaking; ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಪತಿ ಚುನಾವಣೆ ದಿನಾಂಕ ಪ್ರಕಟ
ನವದೆಹಲಿ, ಜೂನ್ 09; ಭಾರತದ ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಗುರುವಾರ ಮಧ್ಯಾಹ್ನ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗವು ಪತ್ರಿಕಾಗೋಷ್ಠಿ ನಡೆಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಜುಲೈ 18ರಂದು ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ.
ಗುರುವಾರ ಮಧ್ಯಾಹ್ನ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಿಗದಿಯಾಗಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು. ಹಾಲಿ ರಾಷ್ಟ್ರಪತಿಯಾಗಿರುವ ರಾಮನಾಥ ಕೋವಿಂದ್ ಅವಧಿ ಜುಲೈ 25ಕ್ಕೆ ಅಂತ್ಯಗೊಳ್ಳಲಿದೆ.
ಆಡಳಿತಾರೂಢ ಬಿಜೆಪಿ ಈಗಾಗಲೇ ರಾಷ್ಟ್ರಪತಿ ಚುನಾವಣೆಗೆ ತಯಾರಿ ನಡೆಸಿದೆ. ಯಾರನ್ನುಅಭ್ಯರ್ಥಿ ಮಾಡಬೇಕು? ಎಂದು ಚರ್ಚೆಗಳು ಜೋರಾಗಿವೆ. ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಯಾರನ್ನು ಅಭ್ಯರ್ಥಿಯಾಗಿ ಮಾಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮತದಾರರ ವಿವಿರ; ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತದಾರರು. ಸಂಸದರು ಹಸಿರು, ಶಾಸಕರು ಗುಲಾಬಿ ಬಣ್ಣದ ಪತ್ರದಲ್ಲಿ ಮತ ಚಲಾವಣೆ ಮಾಡುತ್ತಾರೆ. ನಾಮ ನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕಿಲ್ಲ.
1997ರಿಂದಲೂ ಸಂಸದರ ಮತಮೌಲ್ಯ 708 ಎಂದು ನಿಗದಿ ಮಾಡಲಾಗಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಇಲ್ಲದೇ ಇರುವುದರಿಂದ ಮತ ಮೌಲ್ಯ 708 ರಿಂದ 700ಕ್ಕೆ ಇಳಿಕೆಯಾಗಿದೆ. ಇನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತೆ ಯಾವುದೇ ರಾಜಕೀಯ ಪಕ್ಷಗಳು ವಿಪ್ ಜಾರಿ ಮಾಡುವಂತಿಲ್ಲ. ಈ ಕುರಿತು ಮುಖ್ಯ ಚುನಾವಣಾ ಆಯುಕ್ತರು ಸಹ ಸ್ಪಷ್ಟಪಡಿಸಿದ್ದಾರೆ.
Voting for Presidential elections to be held on 18th July, counting of votes on 21st July: Chief Election Commissioner Rajiv Kumar pic.twitter.com/bTvawdiE9I
— ANI (@ANI) June 9, 2022
ರಾಮನಾಥ್ ಕೋವಿಂದ್ ದೇಶದ 15ನೇ ರಾಷ್ಟ್ರಪತಿಯಾಗಿದ್ದಾರೆ. 16ನೇ ರಾಷ್ಟ್ರಪತಿ ಆಯ್ಕೆಗೆ ಈಗ ಚುನಾವಣೆ ದಿನಾಂಕ ಘೋಷಣೆಯಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯುವುದರಿಂದ ರಾಷ್ಟ್ರಪತಿ ಚುನಾವಣೆ ಮಹತ್ವ ಪಡೆದುಕೊಂಡಿದೆ. ರಾಷ್ಟ್ರಪತಿಗಳು ದೇಶದ ಮೊದಲ ಪ್ರಜೆಯಾಗಿದ್ದು, ಮೂರು ಸೇನೆಗಳ ಮುಖ್ಯಸ್ಥರಾಗಿರುತ್ತಾರೆ.












Click it and Unblock the Notifications