ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಚೇತರಿಕೆ ಹೇಗೆ? ಪ್ರಶಾಂತ್ ಕಿಶೋರ್ ಬಳಿ ಶಿವತಾಂಡವದ 6 ಅಂಶಗಳ ಸೂತ್ರ

|
Google Oneindia Kannada News

ಬೆಂಗಳೂರು, ಏ. 22: ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಬಹುತೇಕ ಚುನಾವಣೆಗಳಲ್ಲಿ ನೆಲ ಕಚ್ಚುತ್ತಾ ಬಂದಿರುವುದು ಹೌದು. ನಾಯಕತ್ವ ಬದಲಾವಣೆಯ ಕೂಗು ಹಿಂದೆಂದಿಗಿಂತಲೂ ಈಗ ಹೆಚ್ಚು ಬಲವಾಗಿ ವ್ಯಕ್ತವಾಗುತ್ತಿದೆ. ಈ ಕೂಗಿಗೆ ಸ್ಪಂದಿಸುವ ಕಿವಿಗಳೂ ಹೆಚ್ಚುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಗೆಲುವಿನ ಲಯಕ್ಕೆ ತರಬೇಕು ಎಂದು ರಾಹುಲ್ ಗಾಂಧಿ ಆದಿಯಾಗಿ ಬಹಳ ಮಂದಿ ಕಸರತ್ತು ಮಾಡಿದ್ದಾರೆ. ಆದರೆ, ಅದರಿಂದ ಆದ ಪ್ರಯೋಜನ ನಗಣ್ಯ. ಈಗ ಅನೇಕ ಚುನಾವಣೆಗಳಲ್ಲಿ ಗೆಲುವಿನ ಸೂತ್ರದಾರನಾಗಿರುವ ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ತಂತ್ರಗಳ ನಿಪುಣ ಕಾಂಗ್ರೆಸ್ ಪಕ್ಷದ ಪುನಃಶ್ಚೇತನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅವರ ಈ ಮಾಸ್ಟರ್ ಪ್ಲಾನ್‌ನಲ್ಲಿ ಏನಿದೆ? ಕಾಂಗ್ರೆಸ್ ಗೆಲುವಿಗೆ ಬಹಳ ಅಗತ್ಯ ಇರುವ ಸೂತ್ರಗಳನ್ನ ಅವರು ಕಂಡುಹಿಡಿದಿದ್ದಾರೆಯೇ?

ಏಳು ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಅತ್ಯಂತ ಅನುಭವಿ ರಾಜಕೀಯ ಪಕ್ಷ ಎನಿಸಿದ ಕಾಂಗ್ರೆಸ್ ಈ 10 ವರ್ಷದಲ್ಲಿ ಅಧೋಗತಿಗಂತೂ ಧುಮುಕಿದೆ. ಈಗ ಅದರ ಪುನಶ್ಚೇತನಕ್ಕಾಗಿ ಕೂಗು ಹೆಚ್ಚಾಗುತ್ತಿದ್ದಂತೆಯೇ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಶಾಂತ್ ಕಿಶೋರ್ ನೆರವು ಯಾಚಿಸಿದ್ದರು. ಕಾಂಗ್ರೆಸ್‌ಗೆ ಯಾವ ರೀತಿ ಚೇತರಿಕೆ ನೀಡಬಹುದು ಎಂದು ಪ್ಲಾನ್ ಪ್ರಸ್ತುತಪಡಿಸುವಂತೆ ಹೇಳಿದ್ದರು. ಅದರಂತೆ ಪ್ರಶಾಂತ್ ಕಿಶೋರ್ ಒಂದು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅದರ ವಿಚಾರಗಳನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕರೊಂದಿಗೆ ಪ್ರಶಾಂತ್ ಕಿಶೋರ್ ಬಾರಿ ಬಾರಿ ಭೇಟಿ ಮಾಡಿ ಮಾತನಾಡಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಸಲಹೆಗಳನ್ನು ಪರಾಮರ್ಶಿಸಲೆಂದೇ ಕಾಂಗ್ರೆಸ್ ಪಕ್ಷ ಒಂದು ಸಮಿತಿ ರಚನೆ ಮಾಡಿದೆ. ಈ ಸಮಿತಿ ಕೂಡ ಪ್ರಶಾಂತ್ ಕಿಶೋರ್ ಅವರನ್ನು ಸಂದರ್ಶಿಸಿ ಅಗತ್ಯ ಮಾಹಿತಿಯನ್ನು ಕಲೆಹಾಕಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಿತಿ ತನ್ನ ಅಭಿಪ್ರಾಯ ಇರುವ ಬೇರೊಂದು ವರದಿಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೊಡಲಿದೆ.

ಪ್ರಶಾಂತ್ ಕಿಶೋರ್ ಪರ ವಹಿಸಿದ ಇಬ್ಬರು ಮುಖ್ಯಮಂತ್ರಿಗಳು ಪ್ರಶಾಂತ್ ಕಿಶೋರ್ ಪರ ವಹಿಸಿದ ಇಬ್ಬರು ಮುಖ್ಯಮಂತ್ರಿಗಳು

ಪ್ರಶಾಂತ್ ಕಿಶೋರ್ ಮಾಸ್ಟರ್ ಪ್ಲಾನ್ ಇದು:

ಪ್ರಶಾಂತ್ ಕಿಶೋರ್ ಮಾಸ್ಟರ್ ಪ್ಲಾನ್ ಇದು:

ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್‌ನ ಶಕ್ತಿ ಮತ್ತು ದೌರ್ಬಲ್ಯಗಳನ್ನ ಬಹಳ ಸ್ಪಷ್ಟವಾಗಿ ಗುರುತಿಸಿ ಮುಂದೆ ಸಾಗಬಹುದಾದ ಪಥದ ನಕ್ಷೆ ಹಾಕಿದ್ದಾರೆ. ಪಕ್ಷದ ಬೆಳವಣಿಗೆಯಲ್ಲಿ ಗಾಂಧಿ ಕುಟುಂಬದ ಪಾತ್ರ ಏನಿರಬೇಕು, ಅದರ ಮುಖ್ಯ ತಂಡದಲ್ಲಿ ಎಂಥವರಿರಬೇಕು, ಅದರ ಪ್ರಮುಖ ಮತದಾರ ವರ್ಗಗಳು ಯಾರು, ಕಾರ್ಯಕರ್ತರನ್ನು ಹೇಗೆ ಬಳಸಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನ ಅವರು ವಿಷದವಾಗಿ ತಮ್ಮ ಪ್ರೆಸೆಂಟೇಶನ್‌ನಲ್ಲಿ ತಿಳಿಸಿದ್ದಾರೆನ್ನಲಾಗಿದೆ.

ಗಾಂಧಿ ಕುಟುಂಬದವರಿಗೆ ಏನು ಸ್ಥಾನಮಾನ?

ಗಾಂಧಿ ಕುಟುಂಬದವರಿಗೆ ಏನು ಸ್ಥಾನಮಾನ?

ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಹೊರಬೇಕು ಎಂಬುದು ಪ್ರಶಾಂತ್ ಕಿಶೋರ್ ಬಹಳ ಸ್ಪಷ್ಟವಾಗಿ ಹೇಳಿರುವ ಸಂಗತಿ. ಇದು ಬಹುತೇಕ ಕಾಂಗ್ರೆಸ್ಸಿಗರಿಗೆ ತುಸು ಕಸಿವಿಸಿ ಉಂಟು ಮಾಡುವ ವಿಚಾರವೂ ಹೌದು. ಹಾಗಾದರೆ, ಗಾಂಧಿ ಕುಟುಂಬದವರು ನೇಪಥ್ಯಕ್ಕೆ ಸರಿಯಬೇಕಾ? ಹಾಗೇನಿಲ್ಲ, ಎಐಸಿಸಿ ಅಧ್ಯಕ್ಷ ಸ್ಥಾನದ ನಂತರ ಬಹಳ ಪ್ರಮುಖವಾಗಿರುವ ಯುಪಿಎ ಅಧ್ಯಕ್ಷ ಸ್ಥಾನ, ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ವಹಿಸಿಕೊಳ್ಳಬಹುದು ಎಂಬುದು ಪಿಕೆ ಸಲಹೆ.

ಮುಖ್ಯ ತಂಡದಲ್ಲಿ ಯಾರಿರಬೇಕು:

ಮುಖ್ಯ ತಂಡದಲ್ಲಿ ಯಾರಿರಬೇಕು:

ಕಾಂಗ್ರೆಸ್ ಪಕ್ಷದೊಳಗೆ ಬೌದ್ಧಿಕ ಶ್ರೀಮಂತಿಕೆ ಬೆಳೆಸಲು ಅನುವಾಗುವಂತೆ ಒಂದು ಮುಖ್ಯ ತಂಡವೊಂದನ್ನು ಕಟ್ಟಬೇಕು. ಅದರಲ್ಲಿ 20-25 ಅನುಭವಿ ಮತ್ತು ಹೊಸಬ ರಾಜಕಾರಣಿಗಳಿರಬೇಕು. 10-12 ಬುದ್ಧಿವಂತ ಉದ್ಯಮಿಗಳನ್ನೂ ಒಳಗೊಳ್ಳಬೇಕು. ಸಂಸತ್‌ನ ಒಳಗೆ ಮತ್ತು ಹೊರಗೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಈ ತಂಡ ನೆರವಾಗುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬೆಂಬಲಿಗ ಮಾಧ್ಯಮಗಳ ಜಾಲ:

ಬೆಂಬಲಿಗ ಮಾಧ್ಯಮಗಳ ಜಾಲ:

ಆಡಳಿತಾರೂಢ ಬಿಜೆಪಿ ಪಕ್ಷ ಸದ್ಯ ಮಾಧ್ಯಮ ಜಗತ್ತನ್ನು ತನ್ನ ಪ್ರಭಾವ ಹಾಗು ಸಂಪನ್ಮೂಲಗಳಿಂದ ನಿಯಂತ್ರಣದಲ್ಲಿಟ್ಟುಕೊಂಡಿದೆ. ಹೀಗಾಗಿ, ಸಾಂಪ್ರದಾಯಿಕ ಮಾಧ್ಯಮದ ಧ್ವನಿ ಬಹುತೇಕ ಆಡಳಿತ ಪಕ್ಷದ ಪರವಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ತಾತ್ವಿಕವಾಗಿ ಸಂಬದ್ಧವಾಗಿರುವ ಡಿಜಿಟಲ್ ಕಾಂಟ್ರಿಬ್ಯೂಟರ್‌ಗಳ ಒಂದು ಜಾಲವನ್ನು ನಿರ್ಮಿಸಬೇಕು. 543 ಡಿಜಿಟಲ್ ಜೋನ್‌ಗಳನ್ನುನಿರ್ಮಿಸಬೇಕು. ಈ ಪ್ರತಿಯೊಂದು ವಲಯದಲ್ಲೂ ಡಿಜಿಟಲ್ ಆಗಿ ಸಂಪರ್ಕ ಇರಿಸಿಕೊಂಡ 5 ಲಕ್ಷ ಜನರು ಇರುವ ಒಂದು ಇಕೋಸಿಸ್ಟಂ ಸಿದ್ಧವಾಗಿರಬೇಕು.

ನಟರಾಜನ ನರ್ತನದ ಆರು ಕೃತ್ಯಗಳು:

ನಟರಾಜನ ನರ್ತನದ ಆರು ಕೃತ್ಯಗಳು:

ಪುರಾಣದಲ್ಲಿ ಉಲ್ಲೇಖಿಸಲಾಗಿರುವ ಶಿವ ತಾಂಡವದ ಆರು ಅಂಶಗಳನ್ನ ಪ್ರಶಾಂತ್ ಕಿಶೋರ್ ತಮ್ಮ ಈ ಯೋಜನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಶಿವ ತಾಂಡವ ಎಂದರೆ ಪರಮಶಿವ ಅಥವಾ ನಟರಾಜನ ನರ್ತನದ ಆರು ಕೃತ್ಯಗಳು. ಸೃಷ್ಟಿ, ಸ್ಥಿತಿ, ಅನುಗ್ರಹ, ಸಂಹಾರ, ತಿರೋಭಾವ ಮತ್ತು ಉಪಸ್ಮಾರ ಇವು ಆ ಆರು ಅಂಶಗಳು. ಕಾಂಗ್ರೆಸ್ ಪಕ್ಷದ ಆತ್ಮ ಇಟ್ಟುಕೊಂಡು ಹೊಸದಾಗಿ ಚೌಕಟ್ಟು (ದೇಹ) ನಿರ್ಮಿಸಲು ಈ ಅಂಶಗಳನ್ನ ಅಳವಡಿಸಿಕೊಳ್ಳಬೇಕು. ಹೊಸ ಅವತಾರದ ಕಾಂಗ್ರೆಸ್ ಪಕ್ಷ ಜನಸಮುದಾಯದ ಮೊದಲ ಆಯ್ಕೆ ಆಗಬೇಕು. ಪಕ್ಷದ ತತ್ವಗಳು ಸಂಬದ್ಧವಾಗಿರಬೇಕು. ಪಕ್ಷದೊಳಗೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವ್ಯಕ್ತಿಪೂಜೆ ಇತ್ಯಾದಿ ಇರದ ವಾತಾವರಣ ಬೇಕು.

ಗೆಲುವಿನ ರಣತಂತ್ರಗಳು:

ಗೆಲುವಿನ ರಣತಂತ್ರಗಳು:

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಶೇ. 45ರಷ್ಟು ಮತಗಳನ್ನು ಗಳಿಸಬೇಕು. ಅಂದರೆ 30 ಕೋಟಿಯಷ್ಟು ಮತಗಳು ಕಾಂಗ್ರೆಸ್‌ಗೆ ಬೀಳಬೇಕು. ಇಷ್ಟು ವೋಟುಗಳನ್ನ ಕಾಂಗ್ರೆಸ್‌ಗೆ ನೀಡಬಲ್ಲ ಎಂಟು ಜನವರ್ಗಗಳನ್ನ ಪಿಕೆ ಗುರುತಿಸಿದ್ದಾರೆ. ಮಹಿಳೆಯರು, ರೈತರು, ಯುವಸಮುದಾಯ, ಎಸ್‌ಸಿ ಸಮುದಾಯ, ಎಸ್‌ಟಿ ಸಮುದಾಯ, ಕೃಷಿಭೂಮಿ ಇಲ್ಲದ ಕಾರ್ಮಿಕರು, ಮಧ್ಯಮವರ್ಗದವರು ಮತ್ತು ನಗರ ಪ್ರದೇಶದ ಬಡವರು ಈ ಜನರ ಮತ ಕಾಂಗ್ರೆಸ್ ಗೆಲುವಿಗೆ ದಾರಿ ಮಾಡಿಕೊಡಬಹುದು ಎಂಬುದು ಅವರ ಎಣಿಕೆ.

ಮೋದಿ ವಿರುದ್ಧ ಹೋರಾಟ ರೂಪಿಸಿ:

ಮೋದಿ ವಿರುದ್ಧ ಹೋರಾಟ ರೂಪಿಸಿ:

ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸ್ಪಷ್ಟ ರಣತಂತ್ರ ಇರಬೇಕು. ಗಾಂಧಿ ವರ್ಸಸ್ ಗೋಡ್ಸೆ, ಸತ್ಯ ವರ್ಸಸ್ ಸುಳ್ಳು, ಭರವಸೆ ವರ್ಸಸ್ ಪೊಳ್ಳು ಭರವಸೆ ಹೀಗೆ ಇಂಥ ಥೀಮ್ ಇಟ್ಟುಕೊಂಡು ಪ್ರಚಾರ ಹೆಣೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯ ಹಾಗು ಅವರ ನೈಜ ಗುಣವನ್ನು ಜನರ ಮುಂದೆ ಪರಿಣಾಮಕಾರಿ ಇಡಬೇಕು. 'ಹಾನಿಕಾರಕ ಮೋದಿ', 'ಮೋದಿ ಅಧಿಕಾರ ಕಳೆದುಕೊಳ್ಳುತ್ತಾರೆ' ಎಂಬರ್ಥದ ಸ್ಲೋಗನ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಸಂಘಟನೆಯಲ್ಲಿ ಇಂಥವರಿರಬಾರದು:

ಸಂಘಟನೆಯಲ್ಲಿ ಇಂಥವರಿರಬಾರದು:

ಗಂಭೀರ ಅಪರಾಧ ಕೃತ್ಯಗಳಲ್ಲಿ ಆರೋಪ ಎದುರಿಸುತ್ತಿರುವ ಜನರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಲಿ ಅಥವಾ ಪಕ್ಷ ಹುದ್ದೆಯನ್ನಾಗಲೀ ನೀಡದಂತಹ ಕಟ್ಟುನಿಟ್ಟಿನ ನೀತಿ ಹೊಂದಿರಬೇಕು ಎಂಬುದು ಪಿಕೆ ಸಲಹೆ. ಹಾಗೆಯೇ, ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಾಲಿಸಿ ಇರಬೇಕು. ಪಕ್ಷದ ವಿವಿಧ ಹುದ್ದೆಗಳನ್ನ ಒಬ್ಬ ವ್ಯಕ್ತಿಯೇ ನಿರ್ವಹಿಸಬಾರದು. ಹುದ್ದೆಗಳಿಗೆ ಆಯ್ಕೆ ಪಾರದರ್ಶಿಕವಾಗಿರಬೇಕು ಎಂದು ಹೇಳಿದ್ದಾರೆ ಪಿಕೆ.

ಬೇರಿಗೆ ಅಂಟಿರಬೇಕು ನಾಯಕತ್ವ:

ಬೇರಿಗೆ ಅಂಟಿರಬೇಕು ನಾಯಕತ್ವ:

ಪಕ್ಷ ಸಂಘಟನೆಯಲ್ಲಿರುವ 118 ಕೇಂದ್ರೀಯ ನಾಯಕರ ಪೈಕಿ ಚುನಾಯಿತರಾಗಿ ಆಯ್ಕೆ ಆದವರು ಕೇವಲ 23 ಮಂದಿ. ಹೀಗಾಗಿ, ತಳಮಟ್ಟದ ಕಾರ್ಯಕರ್ತರಿಂದ ಬಹಳ ವಿಮುಖರಾಗಿರುವ ನಾಯಕತ್ವ ಕಾಂಗ್ರೆಸ್ ಸಂಘಟನೆಯಲ್ಲಿ ಇದೆ. ಈ ಸಮಸ್ಯೆ ನಿವಾರಿಸಬೇಕು. 1885ರಿಂದ 1998ರವರೆಗೆ 113 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 61 ಅಧ್ಯಕ್ಷರನ್ನ ಕಂಡಿತ್ತು. ಅದೇ 1998ರಿಂದ 24 ವರ್ಷಗಳಲ್ಲಿ ಇಬ್ಬರೇ ಅಧ್ಯಕ್ಷರಾಗಿದ್ದಾರೆ. ಶೇ. 65ರಷ್ಟು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಶೇ. 90ರಷ್ಟು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಒಮ್ಮೆಯೂ ಎಐಸಿಸಿ ಅಧ್ಯಕ್ಷರನ್ನಾಗಲೀ, ಕಾರ್ಯದರ್ಶಿಯನ್ನಾಗಲೀ ಭೇಟಿ ಮಾಡಿಯೇ ಇಲ್ಲ. ಕಾಂಗ್ರೆಸ್ ನಾಯಕತ್ವದಲ್ಲಿರುವವರೆಗೆ ತಳಮಟ್ಟದ ಕಾರ್ಯಕರ್ತರ ಪಡೆ ಬಗ್ಗೆ ಅರಿವಿರಬೇಕು ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಹೋರಾಟಗಳ ಕೊರತೆ:

ದೊಡ್ಡ ಹೋರಾಟಗಳ ಕೊರತೆ:

ಜನರ ಮನಸ್ಸನ್ನು ಆಕ್ರಮಿಸಿಕೊಳ್ಳಲು ದೊಡ್ಡಮಟ್ಟದ ಆಂದೋಲನ ಬಹಳ ಅಗತ್ಯ. ಕಾಂಗ್ರೆಸ್ ಪಕ್ಷದಿಂದ ಇಂಥದ್ದೊಂದು ದೊಡ್ಡ ಆಂದೋಲನ 30 ವರ್ಷಗಳಿಂದ ನಡೆದೇ ಇಲ್ಲ. 1990ರಲ್ಲಿ ರಾಜೀವ್ ಗಾಂಧಿ ಅವರು ಭಾರತ್ ಯಾತ್ರಾ ಕೈಗೊಂಡಿದ್ದೇ ಕೊನೆ. 2014ರಿಂದೀಚೆ ಕಾಂಗ್ರೆಸ್ ಪಕ್ಷ 24 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದೇ ಇಲ್ಲ... ಕಾಂಗ್ರೆಸ್ ಪಕ್ಷದ ಗುರಿ, ರಣತಂತ್ರ, ಕಾರ್ಯನಿಧಾನ, ಮಾರ್ಗ ಇತ್ಯಾದಿಗಳಲ್ಲಿ ಸಂಬದ್ಧತೆ ಇಲ್ಲ. ಹಲವು ಬಾರಿ ಗೊಂದಲಗಳೇ ಮನೆ ಮಾಡಿ ಕೊನೆಗೆ ಮುಂದಿನ ದಾರಿ ಏನೆಂಬುದು ಸ್ಪಷ್ಟವಾಗಿರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ದೌರ್ಬಲ್ಯವನ್ನು ಪಿಕೆ ಎತ್ತಿತೋರಿಸಿದ್ದಾರೆ.

ಕಾಂಗ್ರೆಸ್‌ಗೆ ಸೋಲುಣಿಸಿದ ಆಂದೋಲನಗಳಿವು:

ಕಾಂಗ್ರೆಸ್‌ಗೆ ಸೋಲುಣಿಸಿದ ಆಂದೋಲನಗಳಿವು:

ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಆಂದೋಲನ, ಎಂಬತ್ತರ ದಶಕದ ಬೋಫೋರ್ಸ್ ಹಗರಣ, ತೊಂಬತ್ತರ ದಶಕದ ಮಂಡಲ್ ಹೋರಾಟ, ರಾಮಮಂದಿರ ಆಂದೋಲನ, ಕಳೆದ ದಶಕದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನಗಳು ಕಾಂಗ್ರೆಸ್ ಪಕ್ಷಕ್ಕೆ ಮುಳುವಾದ ಸಂಗತಿಯನ್ನ ಪ್ರಶಾಂತ್ ಕಿಶೋರ್ ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಸಾಧನೆಗಳ ಪ್ರಚಾರ ಯಾಕಿಲ್ಲ:

ಕಾಂಗ್ರೆಸ್ ಸಾಧನೆಗಳ ಪ್ರಚಾರ ಯಾಕಿಲ್ಲ:

ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಗಳಲ್ಲಿ ಮಾಡಿದ ಸಾಧನೆಗಳನ್ನ ಜನರಿಗೆ ಸಮರ್ಪಕವಾಗಿ ತಿಳಿಸಲು ವಿಫಲವಾಗಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಭಾರತಕ್ಕೆ ಪ್ರಜಾತಂತ್ರ ವ್ಯವಸ್ಥೆ ತಂದುಕೊಡಲು ಪ್ರಮುಖ ಪಾತ್ರ ವಹಿಸಿದರು. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸುವುದರ ಹಿಂದೆ ಇಂದಿರಾ ಗಾಂಧಿ ಉಕ್ಕಿನ ಕೈಗಳಿದ್ದವು; ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದೂ ಇಂದಿರಾ ಅವರೆಯೇ; ರಾಜೀವ್ ಗಾಂಧಿ ಅವರು ಟೆಲಿಕಾಂ ಕ್ರಾಂತಿ ತಂದರು, ಪಂಚಾಯತ್ ರಾಜ್ ವ್ಯವಸ್ಥೆ ಚಾಲನೆಗೆ ಬರಲು ಕಾರಣರಾದರು; ನರಸಿಂಹ ರಾವ್ ಸರಕಾರ ಆರ್ಥಿಕ ಉದಾರನೀತಿಗಳನ್ನ ಜಾರಿಗೆ ತಂದರು; ಮನಮೋಹನ್ ಇಸಿಂಗ್ ಅವರ ಅಧಿಕಾರಾವಧಿಯಲ್ಲಿ ಭಾರತ ಸಮೃದ್ಧವಾಗಿ ಬೆಳೆಯುತ್ತಿತ್ತು; ಆರ್‌ಟಿಐ, ಆರ್‌ಟಿಇ ಇತ್ಯಾದಿ ಹಕ್ಕುಗಳನ್ನ ಜನರಿಗೆ ಒದಗಿಸುವ ಶಾಸನಗಳನ್ನ ರೂಪಿಸಲಾಯಿತು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಭಾರತ ಅನೇಕ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿತ್ತು. ಈ ಎಲ್ಲಾ ವಿಚಾರಗಳನ್ನ ಜನರಿಗೆ ಮುಟ್ಟಿಸಲು ಸಾಧ್ಯವಾಗಿಲ್ಲ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ಈ ಐದು ವಿಚಾರಗಳಿಗೆ ತುರ್ತಾಗಿ ಗಮನಹರಿಸಿ:

ಈ ಐದು ವಿಚಾರಗಳಿಗೆ ತುರ್ತಾಗಿ ಗಮನಹರಿಸಿ:

1) ನಾಯಕತ್ವ ಸಮಸ್ಯೆಗೆ ಪರಿಹಾರ
2) ಮೈತ್ರಿಕೂಟದ ಗೊಂದಲ ನಿವಾರಣೆ
3) ಪಕ್ಷದ ಮೂಲ ತತ್ವಗಳಿಗೆ ಬದ್ಧ
4) ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಪಡೆ ನಿರ್ಮಾಣ
5) ಕಾಂಗ್ರೆಸ್‌ಗೆ ಬೆಂಬಲಸಬಲ್ಲ ಸಮಾನಮನಸ್ಕ ಮಾಧ್ಯಮಗಳ ನೆಟ್‌ವರ್ಕ್ ರೂಪಿಸಿ ಡಿಜಿಟಲ್ ಆಗಿ ಪ್ರಚಾರ ಮಾಡುವ ಇಕೋಸಿಸ್ಟಂ ನಿರ್ಮಿಸಬೇಕು.
ಕಾಂಗ್ರೆಸ್‌ಗೆ ಹೊಸ ಕಾಯಕಲ್ಪ ನೀಡಲು ಈ ಐದು ಅಂಶಗಳ ಬಗ್ಗೆ ಮೊದಲು ನಿರ್ಧಾರ ಕೈಗೊಳ್ಳಿ ಎಂದು ಪ್ರಶಾಂತ್ ಕಿಶೋರ್ ಸಲಹೆ ಕೊಟ್ಟಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

ಅಪ್ಪ ಸರಿ ಮಕ್ಕಳು ತಪ್ಪು ಅನ್ನೋ ಸರ್ಕಾರದ ನಡೆಗೆ ಟಾಂಗ್ ಕೊಟ್ಟ ಉಪೇಂದ್ರ | Oneindia Kannada

English summary
Prashant Kishor has submitted his masterplan to revive Congress in coming days. Here are highlights of the congress revival plan presented by PK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X