CM Post Row: ಕಾಂಗ್ರೆಸ್ ಸರ್ಕಾರದಲ್ಲಿ ಅಂತರ್ಯುದ್ಧ, ಹದಗೆಟ್ಟ ಆಡಳಿತ ಯಂತ್ರ: ಪ್ರಹ್ಲಾದ್ ಜೋಶಿ
ನವದೆಹಲಿ, ಜೂನ್ 28: ಕರ್ನಾಟಕದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಿಎಂ ಕುರ್ಚಿ ವಿಚಾರ ಆಗಾಗ ಮುನ್ನೆಲೆ ಬರುತ್ತಲೇ ಇದೆ. ಇದೀಗ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಬಹಿರಂಗವಾಗಿಯೇ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ. ಈ ಬೆನ್ನಲ್ಲೆ ಸಿಎಂ ಕುರ್ಚಿ ಜಗಳದ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿನ ಮುಖ್ಯಮಂತ್ರಿ ಸ್ಥಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯೆ ಮುಸಿಕಿನ ಗುದ್ದಾಟ ಇದ್ದೆ ಇದೆ ಎಂಬುದು ಗುಟ್ಟಾಗೇನು ಉಳಿದಿಲ್ಲ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ ನಡೆದಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಅಂತರ್ಯುದ್ಧ ನಡೆದಿದ್ದು, ಸರ್ಕಾರ ಸಂಪೂರ್ಣ ಆಡಳಿತ ವೈಫಲ್ಯ ಕಂಡಿದೆ ಎಂದು ದೂರಿದರು.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಿಂದಲೂ ಮುಖ್ಯಮಂತ್ರಿ (CM) ಸ್ಥಾನಕ್ಕೆ ಮಾತ್ರವಲ್ಲದೇ, ಉಪಮುಖ್ಯಮಂತ್ರಿ (DCM) ಹುದ್ದೆಗಾಗಿ ಪೈಪೋಟಿ, ಹೋರಾಟ ನಡೆದೇ ಇದೆ. ಈ ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ.
ನಾಯಕರೊಳಗಿನ ಅಂತರ್ಯುದ್ಧ ಗಂಭೀರ ಸ್ವರೂಪ ಪಡೆದಂತಿದೆ. ಇದು ಸಹಜವಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ವೈಫಲ್ಯ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ವೀಕ್ ಮಾಡಲು ಸಿಎಂ ಸಿದ್ದರಾಮಯ್ಯ ಚಿಂತಿಸುತ್ತಿರುವಂತಿದೆ. ಹೀಗಾಗಿಯೇ ಕಾಂಗ್ರೆಸ್ ನ ಒಂದು ಬಣ ಹೆಚ್ಚಿನ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಕೆ ಶಿಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಮತ್ತೊಂದು ಬಣ ಒತ್ತಡ ಹೇರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಅವರು ವಿವರಿಸಿದರು.
ಒಟ್ಟಾರೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಹಾಗೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆಳಿಗಾಗಿ ಆಂತರಿಕ ಕಾದಾಟ ಶುರುವಾಗಿದೆ. ಇದೆಲ್ಲದರ ಪರಿಣಾಮ ಆಡಳಿತದ ಮೇಲೆ ಬೀರುತ್ತಿದೆ ಎಂದು ಜೋಶಿ ಅವರು ತಿಳಿಸಿದರು.
ಆಡಳಿತ ಯಂತ್ರ ಕುಸಿತ
ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ರಾಜ್ಯದ ಹಣಕಾಸು ಸ್ಥಿತಿಗತಿಯೂ ಸರಿಯಿಲ್ಲದಾಗಿದೆ ಎಂದು ಪ್ರಹ್ಲಾದ್ ಜೋಶಿ ಅವರು ಆರೋಪಿಸಿದರು.
ಇನ್ನೂ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ದರ ಏರಿಕೆ ಮಾಡಿದ್ದಾಗಿ ಸಚಿವರು ಹೇಳಿಕೊಂಡಿದ್ದಾರೆ. ಇದರೊಂದಿಗೆ ಸರ್ಕಾರ ಬಂದ ಬಳಿಕ ಕೆಲವು ಬಾರಿ ಮದ್ಯದ ಬೆಲೆ, ಹಾಲಿ ದರ ಏರಿಕೆ ಆಗಿದ್ದು, ಇದೀಗ ನೀರಿನ ದರ ಏರಿಕೆ ಪ್ರಸ್ತಾವನೆ ಇದೆ. ಸಾರ್ವಜನಿಕ ಬಸ್ ಪ್ರಯಾಣ ದುಬಾರಿಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂದು ಕೇವಲ ಬಿಜೆಪಿ ನಾಯಕರು ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲೂ ಮಾತುಗಳು ಕೇಳಿ ಬಂದಿವೆ.












Click it and Unblock the Notifications