ಅಗಲಿದ ಪಂಜಾಬ್ ನಾಯಕನಿಗೆ ಪ್ರಧಾನಿ ನರೇಂದ್ರ ಮೋದಿ ನಮನ
ಚಂಡೀಗಢ, ಪಂಜಾಬ್: 5 ಬಾರಿ ಪಂಜಾಬ್ ಸಿಎಂ ಪಟ್ಟಕ್ಕೇರಿ, 20ನೇ ವಯಸ್ಸಿಗೆ ರಾಜಕೀಯಕ್ಕೆ ಎಂಟ್ರಿಯಾಗಿದ್ದ ಪಂಜಾಬ್‌ನ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್‌ಗೆ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ. ಶಿರೋಮಣಿ ಅಕಾಲಿದಳ ಕಚೇರಿಯಲ್ಲಿ ಬಾದಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು ಪ್ರಧಾನಿ. ಈ ಮೂಲಕ ಅತ್ಯಾಪ್ತ ಹಿರಿಯ ನಾಯಕನಿಗೆ ಪ್ರಧಾನಿ ಮೋದಿ ವಿದಾಯ ಹೇಳಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಏಪ್ರಿಲ್ 21 ರಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ಇಹಲೋಕ ತ್ಯಜಿಸಿದ್ದರು. ಈ ಸುದ್ದಿ ದೇಶಾದ್ಯಂತ ಬರಸಿಡಿಲಿನಂತೆ ಅಪ್ಪಳಿಸಿತ್ತು. ಬಾದಲ್ ಅವರ ನಿಧನದ ಹಿನ್ನೆಲೆ ಕೇಂದ್ರ ಸರ್ಕಾರವು ಭಾರತದಾದ್ಯಂತ 2 ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ. ಹಾಗೇ ಮತ್ತೊಂದೆಡೆ ಇಂದು ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ, ಬಾದಲ್ ಸ್ನೇಹ
ಪ್ರಧಾನಿ ಮೋದಿ, ಪ್ರಕಾಶ್ ಸಿಂಗ್ ಬಾದಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡುವೆ ಉತ್ತಮ ಸ್ನೇಹವಿತ್ತು. ಈ ಮೂವರು ನಾಯಕರು ಒಟ್ಟಾಗಿಯೇ ಹಲವು ನಿರ್ಣಯ ಕೈಗೊಂಡಿದ್ದರು. ಅದರಲ್ಲೂ ಪ್ರಕಾಶ್ ಸಿಂಗ್ ಬಾದಲ್ ಅವರ ರಾಜಕೀಯ ಸಲಹೆಗಳು ಎಷ್ಟೋ ಬಾರಿ ಸಮ್ಮಿಶ್ರ ಸರ್ಕಾರಕ್ಕೆ ನೆರವಾಗಿದ್ದವು. ಹೀಗೆ ಹಲವು ದಶಕಗಳ ಕಾಲ ಇವರ ನಡುವೆ ಉತ್ತಮ ಒಡನಾಟವಿತ್ತು. ಹೀಗಾಗಿ ತಮ್ಮ ಅತ್ಯಾಪ್ತ ಹಿರಿಯ ನಾಯಕನಿಗೆ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.
ಚಂಡೀಗಢಕ್ಕೆ ಆಗಮಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಜೊತೆಗೂಡಿ ಅಕಾಲಿದಳ ಕಚೇರಿಗೆ ಆಗಮಿಸಿದರು. ಇನ್ನು ಪಿಎಂ ಮೋದಿ ಅಂತಿಮ ನಮನ ಸಲ್ಲಿಸಿದ ಬಳಿಕ, ಬಾದಲ್ ಅವರ ಪುತ್ರ ಎಸ್‌ಎಡಿ ಮುಖ್ಯಸ್ಥ ಸುಖ್‌ಬಿರ್ ಸಿಂಗ್ ಬಾದಲ್‌ಗೆ ಸಾಂತ್ವನ ಹೇಳಿದರು. ಜೊತೆಗೆ ಹಲವು ಗಣ್ಯರು ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಂತಿಮ ನಮನ ಸಲ್ಲಿಸಿ, ಬಾದಲ್ ಅವರ ರಾಜಕೀಯ ಸಾಧನೆ ನೆನಪು ಮಾಡಿಕೊಂಡಿದ್ದಾರೆ. ಬಾದಲ್ ಅವರ ರಾಜಕೀಯ ಸಾಧನೆ ಬಗ್ಗೆ ಮುಂದೆ ಓದಿ.
20ನೇ ವಯಸ್ಸಿಗೆ ರಾಜಕೀಯ, 5 ಬಾರಿ ಸಿಎಂ
ಒಂದಲ್ಲ ಎರಡಲ್ಲ ಒಟ್ಟು 5 ಬಾರಿ ಪಂಜಾಬ್‌ನ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು ಪ್ರಕಾಶ್ ಸಿಂಗ್ ಬಾದಲ್. 20ನೇ ವಯಸ್ಸಿಗೆ ಬಾದಲ್ ಗ್ರಾಮದ ಸರಪಂಚರಾಗಿ ನೇಮಕವಾದ ನಂತರ ಕೆಲವೇ ವರ್ಷದಲ್ಲಿ ಲಂಬಿ ಗ್ರಾಮದ ಬ್ಲಾಕ್ ಕಮಿಟಿ ಚೇರ್‌ಮನ್ ಆಗಿ ಕೂಡ ಆಯ್ಕೆಯಾಗಿದ್ದರು. ಇಷ್ಟೆಲ್ಲದರ ನಡುವೆ ಪಂಜಾಬ್ ವಿಧಾನಸಭೆ ಪ್ರವೇಶಕ್ಕೂ ಅವರಿಗೆ ಅವಕಾಶ ಒದಗಿ ಬಂದಿತ್ತು. 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1969ರಲ್ಲಿ ಮರು ಆಯ್ಕೆಯಾಗಿ, ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಇದೇ ಮುಂದೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಹಾಯವಾಗಿತ್ತು.

ರಾಜಕೀಯ ಸೇವೆಯ ಇತಿಹಾಸ
ಸಮಾಜ-ಕಲ್ಯಾಣ, ಪಂಚಾಯ್ತಿರಾಜ್, ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಪಾರ ಜ್ಞಾನ ತಂದುಕೊಟ್ಟಿತ್ತು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಇತ್ತು. ಮುಂದೆ 1970 ರಿಂದ 71, 1977 ರಿಂದ 80, 1997 ರಿಂದ 2002 ಹಾಗೂ 2007 ರಿಂದ 2012 ಮತ್ತು 2012 ರಿಂದ 2017 ರವರೆಗೆ 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಹೀಗೆ ಪಂಜಾಬ್ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ.
ಶಾಸಕರಾಗಿ ದಾಖಲೆ ನಿರ್ಮಾಣ
ಈಗೆಲ್ಲಾ ಒಂದೆರಡು ಬಾರಿ ಶಾಸಕರಾದರೆ ಸಾಕು ಸಚಿವ ಸ್ಥಾನಕ್ಕೆ ಫೈಟಿಂಗ್ ಶುರುವಾಗುತ್ತದೆ. ಆದರೆ ಪ್ರಕಾಶ್ ಸಿಂಗ್ ಬಾದಲ್ 10 ಬಾರಿ ಶಾಸಕರಾಗಿ ಸಾಧನೆ ಮಾಡಿದ್ದರು. 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಜೊತೆಗೆ 3 ಬಾರಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. 1972, 1980 ಮತ್ತು 2002ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು ಪ್ರಕಾಶ್ ಸಿಂಗ್ ಬಾದಲ್. 1995ರಿಂದ 2008ರವರೆಗೆ ಶಿರೋಮಣಿ ಅಕಾಲಿದಳದ ಅಧ್ಯಕ್ಷರೂ ಆಗಿ ಬಾದಲ್ ಅವರಿಗೆ ಕಾರ್ಯನಿರ್ವಹಿಸಿದ ಅನುಭವ ಇತ್ತು.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಪ್ರಕಾಶ್ ಸಿಂಗ್ ಬಾದಲ್ ಅವರ ಮೃತದೇಹವನ್ನು ರಾಜಪುರ, ಪಟಿಯಾಲ, ಸಂಗ್ರೂರ್, ಬರ್ನಾಲಾ, ರಾಂಪುರ ಫುಲ್ ಮತ್ತು ಬಟಿಂಡಾ ಮೂಲಕ ಮುಕ್ತಸರ್‌ನಲ್ಲಿರುವ ಅವರ ಸ್ವಗ್ರಾಮ ಬಾದಲ್‌ಗೆ ಕೊಂಡೊಯ್ಯಲಾಯಿತು. ಅಲ್ಲದೆ ಅಂತಿಮ ದರ್ಶನಕ್ಕಾಗಿ ಶಿರೋಮಣಿ ಅಕಾಲಿದಳ ಕಚೇರಿಯಲ್ಲಿ ಸಕಲ ಸಿದ್ಧತೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮಗಳನ್ನು ಪಂಜಾಬ್ ಸರ್ಕಾರ ಕೈಗೊಂಡಿತ್ತಲ್ಲದೆ, ಭದ್ರತೆ ಕೂಡ ಹೆಚ್ಚಿಸಲಾಗಿತ್ತು. ಹಾಗೇ ಮತ್ತೊಂದು ಕಡೆ ದೇಶಾದ್ಯಂತ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದರು. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ತೀವ್ರ ಮುನ್ನೆಚ್ಚರಿಕೆ ವಹಿಸಿದ್ದರು.

ಪ್ರಕಾಶ್ ಸಿಂಗ್ ಬಾದಲ್ ಅವರ ನಿರ್ಗಮನ ಪಂಜಾಬ್ ರಾಜಕೀಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ತುಂಬಲಾಗದ ನಷ್ಟ. ಬಾದಲ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಒ.ಪಿ. ಚೌತಾಲಾ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಪಟಿಯಾಲ ಸಂಸದ ಪರ್ಣೀತ್ ಕೌರ್, ಬಾದಲ್ ಅವರ ಅಳಿಯ ಆದೇಶ್ ಪರ್ತಾಪ್ ಸಿಂಗ್ ಕೈರೋನ್, ಕೇಂದ್ರ ಸಚಿವ ಸೋಮ್ ಪ್ರಕಾಶ್ ಬಲ್‌ಬೀರ್ ಸಿಂಗ್ ಸಿಧು ಮುಂತಾದವರು ಅಂತಿಮ ನಮನ ಸಲ್ಲಿಸಿದ್ದಾರೆ. ಬಾದಲ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಪಂಜಾಬ್ ಸರ್ಕಾರ ನಾಳೆ ರಜೆ ಘೋಷಣೆ ಮಾಡಿದೆ. ಗುರುವಾರ ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications