ಮೇ 28ರಂದು ಹೊಸ ಸಂಸತ್ ಕಟ್ಟಡ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
ಮೇ 28ರಂದು ಹೊಸ ಸಂಸತ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. ಗುರುವಾರ ಓಂ ಬಿರ್ಲಾ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹೊಸ ಸಂಸತ್ ಭವನ ಉದ್ಘಾಟಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.
ದಾಖಲೆಯ ಸಮಯದಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಮೇ ತಿಂಗಳ ಅಂತ್ಯದಲ್ಲಿ ಸಂಸತ್ ಭವನ ಉದ್ಘಾಟನೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು ಅದರಂತೆ ಈಗ ದಿನಾಂಕ ಕೂಡ ನಿಗದಿಯಾಗಿದೆ.

ಮೇ 29 ರಂದು ಆಡಳಿತಾರೂಢ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳನ್ನು ಪೂರೈಸಲಿದೆ. ಈ ಸಂದರ್ಭವನ್ನು ವಿಶೇಷವಾಗಿ ಆಚರಣೆ ಮಾಡಲು, ಜುಲೈನಲ್ಲಿ ನಡೆಯಲಿರುವ ಮುಂಬರುವ ಮಾನ್ಸೂನ್ ಅಧಿವೇಶನದ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹೊಸ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ.
970 ಕೋಟಿ ರುಪಾಯಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡವು 65,000 ಚದರ ಮೀಟರ್‌ಗಳಲ್ಲಿ ಹರಡಿದೆ, ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯನಿರ್ವಹಣೆಗಾಗಿ ಎರಡು ದೊಡ್ಡ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಒಂದು ಗ್ರಂಥಾಲಯ, ಶಾಸಕರಿಗೆ ಕಚೇರಿಗಳು ಮತ್ತು ಸಭೆಗಳಿಗೆ ಸಮಿತಿ ಕೊಠಡಿಗಳ ಹೊರತಾಗಿ ಅತ್ಯಾಧುನಿಕ ಸಂವಿಧಾನವ ಭವನವನ್ನು ಹೊಂದಿದೆ.

888 ಆಸನ ಸಾಮರ್ಥ್ಯ ಹೊಂದಿರುವ ಲೋಕಸಭೆಯು ನವಿಲು-ಮಾದರಿಯ ವಿನ್ಯಾಸವನ್ನು ಹೊಂದಿದೆ ಮತ್ತು 384 ಆಸನಗಳ ರಾಜ್ಯಸಭಾ ಸಭಾಂಗಣವು ಕಮಲದ ಮಾದರಿಯನ್ನು ಹೊಂದಿದೆ. ಉಭಯ ಸದನಗಳ ಜಂಟಿ ಅಧಿವೇಶನದ ಸಂದರ್ಭದಲ್ಲಿ, ಲೋಕಸಭೆಯ ಕೊಠಡಿಯಲ್ಲಿ ಒಟ್ಟು 1,280 ಸದಸ್ಯರಿಗೆ ಅವಕಾಶ ಕಲ್ಪಿಸಬಹುದಾಗಿದೆ.
2020ರಲ್ಲಿ ಕಟ್ಟಡದ ಶಂಕುಸ್ಥಾಪನೆ
ಡಿಸೆಂಬರ್ 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು. ಕೋವಿಡ್ ಸಾಂಕ್ರಾಮಿಕದ ಕಾರಣ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. 2022ರ ಜುಲೈನಲ್ಲಿ ಪ್ರಧಾನಿ ಮೋದಿಯವರು ನವೀಕರಿಸಿದ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು.
ಸದ್ಯ ಇರುವ ಸಂಸತ್ತಿನ ಕಟ್ಟಡವು 1927 ರಲ್ಲಿ ಪೂರ್ಣಗೊಂಡಿತು, ಈ ಕಟ್ಟಡಕ್ಕೆ ಈಗ 96 ವರ್ಷ ತುಂಬಿದೆ. ಇಂದಿನ ಅಗತ್ಯಗಳಿಗೆ ಹಳೆಯ ಕಟ್ಟಡ ಅಸಮರ್ಪಕವಾಗಿದೆ ಎನ್ನುವ ಕಾರಣ ನೀಡಿ ಹೊಸ ಕಟ್ಟಡವನ್ನು ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಣಯಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ್ದವು.












Click it and Unblock the Notifications