Vande Bharat Express: ಮಕರ ಸಂಕ್ರಾಂತಿಯಂದು ತೆಲಂಗಾಣ, ಆಂಧ್ರಕ್ಕೆ ಹೊಸ ವಂದೇ ಭಾರತ್ ಉಡುಗೊರೆ
ಹೈದರಾಬಾದ್, ಜ. 15: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಎರಡು ತೆಲುಗು ರಾಜ್ಯಗಳ ನಡುವೆ ಕಾರ್ಯನಿರ್ವಹಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂಗಳ ನಡುವಿನ ಪ್ರಯಾಣದ ಸಮಯವನ್ನು ಎಂಟು ಗಂಟೆ 30 ನಿಮಿಷಕ್ಕೆ ಇಳಿಸಿದೆ.
ವರ್ಚುವಲ್ ಆಗಿ ವಂದೇ ಭಾರತ್ ರೈಲಿಗೆ ಚಾಲನೆ ನಿಡಿದ ಪ್ರಧಾನಿ ಮೋದಿ, ವಂದೇ ಭಾರತ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಂಸ್ಕೃತಿಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿದರು.

"ವಂದೇ ಭಾರತ್ ರೈಲುಗಳು ಭಾರತದ ನಿಜವಾದ ಪ್ರತಿರೂಪವಾಗಿದೆ. ಇದು ಅವಲಂಬನೆಯ ಮನಸ್ಥಿತಿಯಿಂದ ಹೊರಬಂದು ಆತ್ಮನಿರ್ಭರ್ತ (ಸ್ವಾವಲಂಬನೆ) ಕಡೆಗೆ ಚಲಿಸುತ್ತಿದೆ" ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಎರಡು ತೆಲುಗು ರಾಜ್ಯಗಳನ್ನು ಸಂಪರ್ಕಿಸುವ ಈ ರೈಲಿನ ನಿಯಮಿತ ಸೇವೆಗಳು ಜನವರಿ 16 ರಿಂದ (ಸೋಮವಾರ) ಪ್ರಾರಂಭವಾಗಲಿದ್ದು, ಶನಿವಾರದಿಂದಲೇ ಬುಕಿಂಗ್ ಪ್ರಾರಂಭವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ವಿಶಾಖಪಟ್ಟಣಂ ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ (20833) ಬೆಳಿಗ್ಗೆ 05.45 ಕ್ಕೆ ಹೊರಟು ಸಿಕಂದರಾಬಾದ್‌ಗೆ ಮಧ್ಯಾಹ್ನ 2.15 ಕ್ಕೆ ತಲುಪುತ್ತದೆ. ಇದೇ ರೈಲು ಸಿಕಂದರಾಬಾದ್‌ನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11.30 ಕ್ಕೆ ವಿಶಾಖಪಟ್ಟಣಂ ತಲುಪಲಿದೆ. ಈ ನಡುವೆ ರಾಜಮಂಡ್ರಿ, ವಿಜಯವಾಡ, ಖಮ್ಮಂ ಮತ್ತು ವಾರಂಗಲ್‌ನಲ್ಲಿ ನಿಲುಗಡೆ ನೀಡಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ಅಧಿಕಾರಿಗಳು ತಿಳಿಸಿದರು.
ರೈಲು 1,128 ಪ್ರಯಾಣಿಕರ ಸಾಮರ್ಥ್ಯದೊಂದಿಗೆ 14 ಎಸಿ ಚೇರ್ ಕಾರ್ ಕೋಚ್‌ಗಳು ಮತ್ತು ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಕೋಚ್‌ಗಳನ್ನು ಒಳಗೊಂಡಿದೆ.
ಈ ರೈಲನ್ನು ಸ್ವದೇಶಿ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದ್ದು, ಆಧುನಿಕ ವೈಶಿಷ್ಟ್ಯಗಳು ಮತ್ತು ವರ್ಧಿತ ಸೌಕರ್ಯಗಳನ್ನು ಹೊಂದಿದೆ. ರೈಲು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು, ಎಲ್ಲಾ ತರಗತಿಗಳಲ್ಲಿ ಒರಗುವ ಮತ್ತು ತಿರುಗುವ ಆಸನಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ಘಾಟನೆಯ ವೇಳೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಸೇನಾ ದಿನಾಚರಣೆಯಂದು ಮಾಡಲಾಗಿದ್ದು, ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿದ ಸಿಬ್ಬಂದಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು . ದೇಶ ಮತ್ತು ಅದರ ಗಡಿಗಳನ್ನು ರಕ್ಷಿಸುವಲ್ಲಿ ಸೈನಿಕರ ಬದ್ಧತೆಯನ್ನು ಶ್ಲಾಘಿಸಿ, ಅವರ ಶೌರ್ಯಕ್ಕೇ ಯಾವುದು ಸಾಟಿಯಿಲ್ಲ ಎಂದು ಹೇಳಿದರು.












Click it and Unblock the Notifications