Karnataka Results: ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ ಮೋದಿ: ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದೇನು?
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಭರ್ಜರಿ ಜಯಬೇರಿ ಬಾರಿಸಿದೆ. ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಚುನಾವಣಾ ಫಲಿತಾಂಶದ ಕುರಿತಂತೆ ಟ್ವೀಟ್ ಮಾಡಿದ್ದು ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
Congratulations to the Congress Party for their victory in the Karnataka Assembly polls. My best wishes to them in fulfilling people’s aspirations.
— Narendra Modi (@narendramodi) May 13, 2023
ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು, ಜನರ ಆಶೋತ್ತರಗಳನ್ನು ಕಾಂಗ್ರೆಸ್ ಪೂರೈಸಲಿ ಎಂದು ಆಶಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೂ ಮೋದಿ ಧನ್ಯವಾದ ತಿಳಿಸಿದ್ದಾರೆ. "ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು, ಬಿಜೆಪಿ ಕಾರ್ಯಕರ್ತರ ಕಠಿಣ ಶ್ರಮದ ಬಗ್ಗೆ ನನಗೆ ಮೆಚ್ಚುಗೆ ಇದೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡೋಣ" ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆಯಲಿಲ್ಲ ಮೋದಿ ಮ್ಯಾಜಿಕ್
ಕರ್ನಾಟಕದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ರಾಷ್ಟ್ರೀಯ ನಾಯಕರ ಮ್ಯಾಜಿಕ್ ಕೆಲಸ ಮಾಡಿಲ್ಲ. ನರೇಂದ್ರ ಮೋದಿಯವರಂತೂ ಬೆಂಗಳೂರಿನಲ್ಲಿ ಮೂರು ದಿನ ರೋಡ್ ಶೋ ಮಾಡುವ ಮತ ಯಾಚನೆ ಮಾಡಿದ್ದರು. ಭಜರಂಗ ದಳ ಬ್ಯಾನ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಷ್ಟ್ರ, ರಾಜ್ಯ ನಾಯಕರು ಮತಯಾಚನೆ ಮಾಡಿದ್ದರು. ಇದು ಬಿಜೆಪಿಗೆ ಲಾಭವಾಗುತ್ತದೆ ಎಂದು ನಂಬಲಾಗಿತ್ತು ಆದರೆ ಮತದಾರ ಈ ಬಾರಿ ಧಾರ್ಮಿಕ ವಿವಾದಗಳನ್ನು ಗಂಭೀರವಾಗಿ ಪರಿಗಣಿಸದೇ ಮತಹಾಕಿದ್ದಾನೆ ಎನ್ನುವುದಂತೂ ಸ್ಪಷ್ಟವಾಗಿದೆ.
ಸೋಲಿನ ಹೊಣೆ ಹೊರುತ್ತೇನೆ ಎಂದ ಕಟೀಲ್
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ತಾನೇ ಹೊರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ, ಒಳ್ಳೆಉ ಕೆಲಸ ಮಾಡಿದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ, ಬಿಜೆಪಿಗೆ ಹಿನ್ನಡೆಯಾಗಿದ್ದು, ರಾಜ್ಯಾಧ್ಯಕ್ಷನಾಗಿ ಇಡೀ ಸೋಲಿನ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಹೇಳಿದರು. ಜನಾದೇಶವನ್ನು ಸ್ವೀಕರಿಸುತ್ತೇವೆ, ಫಲಿತಾಂಶವನ್ನು ಅವಲೋಕನೆ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಬಿಎಸ್ ಯಡಿಯೂರಪ್ಪ, ಸೋಲು ಬಿಜೆಪಿಗೆ ಹೊಸದಲ್ಲ. ಈ ಫಲಿತಾಂಶದಿಂದ ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ, ಸೋಲಿನ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳುತ್ತೇವೆ. ಗೌರವದಿಂದಲೇ ಜನಾದೇಶವನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.












Click it and Unblock the Notifications