ಸ್ವಚ್ಛ ಭಾರತ್ ಮಿಷನ್‌ಗೆ ಚಾಲನೆ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?
ನವದೆಹಲಿ, ಅಕ್ಟೋಬರ್ 1: ದೇಶದ ಪ್ರತಿಯೊಂದು ನಗರಗಳನ್ನು ತ್ಯಾಜ್ಯಮುಕ್ತ ನಗರಗಳನ್ನಾಗಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ನಿತ್ಯ 1 ಲಕ್ಷ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿಸುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ಮತ್ತು ಸುರಕ್ಷತಾ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕೊಳಚೆ ನೀರು ನದಿಗೆ ಸೇರಿದಂತೆ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ದಾರೆ.
ರಾಜ್ಯಗಳು ಈ ನಿಟ್ಟಿನಲ್ಲಿ ಸ್ಪರ್ಧಿಸಬೇಕು, ತಮ್ಮ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕು. ಇದು ನಮ್ಮ ನಗರ ಬಡವರನ್ನು ಮತ್ತಷ್ಟು ಸಬಲಗೊಳಿಸುತ್ತದೆ.
ರಾಜ್ಯಗಳು ಈ ನಿಟ್ಟಿನಲ್ಲಿ ಸ್ಪರ್ಧಿಸಬೇಕು, ತಮ್ಮ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕು. ಇದು ನಮ್ಮ ನಗರ ಬಡವರನ್ನು ಮತ್ತಷ್ಟು ಸಬಲಗೊಳಿಸುತ್ತದೆ ಎಂದು ಮೋದಿ ಹೇಳಿದರು.
2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಸಮಯದಲ್ಲಿ ಉತ್ಪತ್ತಿಯಾಗುತ್ತಿದ್ದ ಪೈಕಿ ಶೇ.20ರಷ್ಟು ಕಸ ಸಂಸ್ಕರಣೆ ಮಾಡಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಪ್ರತಿದಿನ ಶೇ. 70ಕ್ಕೆ ಹೆಚ್ಚು ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಅದನ್ನು ಶೇಕಡಾ ನೂರಕ್ಕೆ ತೆಗೆದುಕೊಂಡು ಹೋಗುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಭಾರತದ ಎರಡು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಬೀದಿಬದಿ ಮಾರಾಟಗಾರರಿಗೆ ಗರಿಷ್ಠ ಸಾಲಗಳನ್ನು ಒದಗಿಸಿದೆ.

ಶೀಘ್ರ ತ್ಯಾಜ್ಯ ರಾಶಿಗಳ ತೆರವು
ದೇಶದ ವಿವಿಧ ನಗರಗಳಲ್ಲಿರುವ ಬೃಹತ್ ತ್ಯಾಜ್ಯ ರಾಶಿಗಳನ್ನು ಶೀಘ್ರ ತೆರವುಗೊಳಿಸುವುದಾಗಿ ಮೋದಿ ಭರವಸೆ ನಿಡಿದರು.
ಸ್ವಚ್ಛ ಭಾರತ ಎರಡನೇ ಅಭಿಮಾನದಲ್ಲಿ ಇಂತಹ ಶಿಖರಗಳು ಎಲ್ಲೆಲ್ಲಿವೆ ಅದನ್ನು ಗುರುತಿಸಿ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು. ದೆಹಲಿಯಲ್ಲಿರುವ ಇಂತಹ ಒಂದು ಕಸದ ರಾಶಿಯನ್ನು ತೆಗೆದು ಹಾಕಲು ಹಲವು ದಿನಗಳಿಂದ ಜನ ಕಾಯುತಿದ್ದಾರೆ. ದೇಶದ ಹಲವು ಭಾಗಗಳಲ್ಲಿದ್ದ ರೀತಿಯ ಕಸದ ಗುಡ್ಡಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಗತಿಪರ ಸ್ಪರ್ಧೆ
ಜಾಗತಿಕ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀರಿನ ನಿರ್ವಹಣೆಯಲ್ಲಿ ದತ್ತಾಂಶ ಆಧರಿತ ಆಡಳಿತ ಹಾಗೂ ʻತಂತ್ರಜ್ಞಾನ ಉಪ-ಯೋಜನೆʼಯನ್ನು ʻಅಮೃತ್ 2.0' ಉತ್ತೇಜಿಸುತ್ತದೆ.
ನಗರಗಳ ನಡುವೆ ಪ್ರಗತಿಪರ ಸ್ಪರ್ಧೆಯನ್ನು ಉತ್ತೇಜಿಸಲು 'ಪೇ ಜಲ್ ಸುರ್ವೇಕ್ಷಣ್' ಅನ್ನು ನಡೆಸಲಾಗುತ್ತದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 2.87 ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.ಕಳೆದ ಏಳು ವರ್ಷಗಳಲ್ಲಿ ನಗರ ಭೂದೃಶ್ಯವನ್ನು ಸುಧಾರಿಸಲು ʻಎಸ್‌ಬಿಎಂ-ಯುʼ ಮತ್ತು ʻಅಮೃತ್ʼ ಗಮನಾರ್ಹ ಕೊಡುಗೆ ನೀಡಿವೆ. ಈ ಎರಡು ಪ್ರಮುಖ ಯೋಜನೆಗಳು ನಾಗರಿಕರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯದ ಮೂಲಸೌಕರ್ಯ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಸ್ವಚ್ಛತೆಯು ಇಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗಿದೆ ಮತ್ತು ಶೇ.70 ಘನ ತ್ಯಾಜ್ಯವನ್ನು ಈಗ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. 1.1 ಕೋಟಿ ಗೃಹ ನೀರಿನ ನಲ್ಲಿ ಸಂಪರ್ಕಗಳು ಮತ್ತು 85 ಲಕ್ಷ ಒಳಚರಂಡಿ ಸಂಪರ್ಕಗಳನ್ನು ಸೇರಿಸುವ ಮೂಲಕ ನೀರಿನ ಭದ್ರತೆಯನ್ನು ʻಅಮೃತ್ʼ ಯೋಜನೆ ಖಾತರಿಪಡಿಸುತ್ತದೆ.

ಚಾಕೊಲೇಟ್ ಕಾಗದ ಜೇಬಿನಲ್ಲಿರಲಿ
ಮಕ್ಕಳಿಗೆ ಪ್ರಧಾನಿ ಮನವಿ
ಚಾಕಲೇಟ್ ತಿಂದ ಬಳಿಕ ಅದರ ಕಾಗದವನ್ನು ಎಲ್ಲೆಂದರಲ್ಲಿ ಬಿಸಾಡದೆ ಅದನ್ನು ಜೇಬಿನಲ್ಲಿ ಹಾಕಿಕೊಂಡು ಅದನ್ನು ನಿಗದಿತ ಡಬ್ಬಿ ಅಥವಾ ಪ್ರದೇಶದಲ್ಲಿ ಹಾಕುವಂತೆ ಹಿರಿಯರು ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸುವ ಮೂಲಕ ಅದರ ಸಂಸ್ಕರಣ ಸಹಕಾರ ನೀಡಬೇಕು. ಎರಡನೇ ಹಂತದ ಸ್ವಚ್ಛ ಭಾರತ ಮಿಷನ್ ನಗರ2.0 ಮತ್ತು ಅಮೃತ 2.0 ಯೋಜನೆ ಡಾ. ಬಿಆರ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರಗಳ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ
2.0 ಯೋಜನೆಗಳೆಂದರೇನು
ʻಸ್ವಚ್ಛ ಭಾರತ ಯೋಜನೆ-ನಗರ 2.0ʼ ಈ ಯೋಜನೆಯು ಎಲ್ಲಾ ನಗರಗಳನ್ನು 'ಕಸ ಮುಕ್ತ'ಗೊಳಿಸುವ ಮತ್ತು ʻಅಮೃತ್ʼ ವ್ಯಾಪ್ತಿಗೆ ಒಳಪಟ್ಟ ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ತ್ಯಾಜ್ಯ ನೀರಿನ ಸೂಕ್ತ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ.
ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗುವಂತೆ ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳು ಒಡಿಎಫ್++ ಆಗಿರುವಂತೆ ಖಾತರಿಪಡಿಸುತ್ತದೆ. ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ಗುರಿಯನ್ನು ಸಾಧಿಸುತ್ತದೆ. ಮೂಲದಲ್ಲೇ ಘನ ತ್ಯಾಜ್ಯದ ವಿಂಗಡಣೆ, ʻ3ಆರ್ʼ (ಕಡಿಮೆಮಾಡುವುದು, ಮರುಬಳಕೆ, ಸಂಸ್ಕರಣೆ), ಪುರಸಭೆಯ ಎಲ್ಲಾ ರೀತಿಯ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಕಸ ಸುರಿಯುವ ಸ್ಥಳಗಳಲ್ಲಿ ಮಾಲಿನ್ಯಕಾರಕಗಳ ನಿವಾರಣೆಯತ್ತ ಈ ಯೋಜನೆಯು ಗಮನ ಹರಿಸಲಿದೆ. ಈ ಯೋಜನೆಯ ವೆಚ್ಚ ಸುಮಾರು 1.41 ಲಕ್ಷ ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.
ಅಮೃತ್ 2.0 ಯೋಜನೆ ಬಗ್ಗೆ ಮಾಹಿತಿ
ʻಅಮೃತ್ 2.0ʼ ಯೋಜನೆಯು ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಸುಮಾರು 2.68 ಕೋಟಿ ನೀರಿನ ಕೊಳಾಯಿ ಸಂಪರ್ಕಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಲಾಗಿದೆ. ಜೊತೆಗೆ 500 ಅಮೃತ್ ನಗರಗಳಲ್ಲಿ 2.64 ಕೋಟಿ ಒಳಚರಂಡಿ/ ಶೌಚಾಲಯ ತ್ಯಾಜ್ಯ ಸಂಪರ್ಕಗಳನ್ನು ಒದಗಿಸುವ ಮೂಲಕ ಶೇ,100ರಷ್ಟು ಒಳಚರಂಡಿ ಮತ್ತು ಶೌಚಾಲಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ10.5 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯಲಿದ್ದಾರೆ.












Click it and Unblock the Notifications