ಡೆಲ್ಟಾ ರೂಪಾಂತರದ ಮೇಲೆ ಫೈಜರ್ ಪರಿಣಾಮಕಾರಿಯಲ್ಲ; ಅಧ್ಯಯನ
ನವದೆಹಲಿ, ಜೂನ್ 04: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಗೆ ಕಾರಣ ಎನ್ನಲಾಗಿರುವ ಡೆಲ್ಟಾ ರೂಪಾಂತರ ಸೋಂಕಿನ ಮೇಲೆ ಫೈಜರ್ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ ಎಂದು ಲ್ಯಾನ್ಸೆಟ್ ಜರ್ನಲ್‌ನ ಹೊಸ ಅಧ್ಯಯನ ತಿಳಿಸಿದೆ.
ಮೂಲ ಸೋಂಕಿಗೆ ಹೋಲಿಸಿದರೆ ಡೆಲ್ಟಾ ರೂಪಾಂತರ ಸೋಂಕಿನ ಮೇಲೆ ಈ ಲಸಿಕೆ ಪರಿಣಾಮಕಾರಿಯಲ್ಲ. ಫೈಜರ್ ಲಸಿಕೆಯ ಒಂದು ಡೋಸ್ ಪಡೆದ ಜನರಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ. ಜೊತೆಗೆ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಾದರೆ ಪ್ರತಿಕಾಯಗಳು ಕ್ರಮೇಣ ತಗ್ಗುತ್ತವೆ ಎಂದು ಅಧ್ಯಯನ ತಿಳಿಸಿದೆ.
ಇಸ್ರೇಲ್: ಫೈಜರ್ ಲಸಿಕೆ ಪಡೆದ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ ಮಯೋಕಾರ್ಡಿಟಿಸ್
ಫೈಜರ್ ಲಸಿಕೆಯ ಒಂದು ಡೋಸ್ ಪಡೆದ 79% ಜನರಲ್ಲಿ, ಮೂಲ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಪ್ರತಿಕಾಯ ಸೃಷ್ಟಿಯಾಗಿತ್ತು. ಆದರೆ ಈ ಪ್ರಮಾಣ ಆಲ್ಫಾ ರೂಪಾಂತರದಲ್ಲಿ 50%, ಡೆಲ್ಟಾ ಸೋಂಕಿಗೆ 32%, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ B.1.351 ಅಥವಾ ಬೆಟಾ ರೂಪಾಂತರದಲ್ಲಿ 25% ಇಳಿದಿರುವುದು ಕಂಡುಬಂದಿದೆ.
ಆಸ್ಪತ್ರೆಗೆ ದಾಖಲಾಗುವುದನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಿಸಲು ಲಸಿಕೆಗಳು ಸಹಕಾರಿಯಾಗಬೇಕು ಎಂಬ ಬಹುಮುಖ್ಯ ಅಂಶವನ್ನು ಗಮನಿಸಬೇಕು ಎಂದಿದೆ ಅಧ್ಯಯನ.
"ಫೈಜರ್ ಲಸಿಕೆ ಪರಿಣಾಮಕಾರಿ ಹೌದೋ ಅಲ್ಲವೋ ಎನ್ನುವುದಕ್ಕಿಂತ, ನಮ್ಮ ಸಂಶೋಧನೆ ಮತ್ತೊಂದು ಅಂಶವನ್ನು ತಿಳಿಸಿದೆ. ಈ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೇ ಡೋಸ್ ನಡುವಿನ ಅಂತರವನ್ನು ಕಡಿಮೆ ಮಾಡುವುದು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಬಹುದು" ಎಂದು ಲೆಗಸಿ ಅಧ್ಯಯನದ ವೈದ್ಯಕೀಯ ಹಿರಿಯ ಸಂಶೋಧಕರಾದ ಎಮ್ಮಾ ವಾಲ್ ಸಲಹೆ ನೀಡಿದ್ದಾರೆ.
ಈಚೆಗೆ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಏರಿಸಲಾಗಿದೆ.
ಆದರೆ ಬ್ರಿಟನ್‌ನಲ್ಲಿ ನೀಡಲಾಗುತ್ತಿರುವ ಫೈಜರ್ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಕಡಿಮೆಗೊಳಿಸಲು ಲ್ಯಾನ್ಸೆಟ್ ಅಧ್ಯಯನ ಈ ಮುನ್ನ ಸಲಹೆ ನೀಡಿತ್ತು. ಹೆಚ್ಚು ವಯಸ್ಸಾದವರಲ್ಲಿ ಈ ಲಸಿಕೆ ಕಡಿಮೆ ಪ್ರತಿಕಾಯ ಸೃಷ್ಟಿಸುತ್ತದೆ ಹಾಗೂ ಕಾಲಾನಂತರ ಲಸಿಕೆ ಪ್ರಭಾವ ತಗ್ಗುತ್ತದೆ ಎಂದು ಹೇಳಿತ್ತು.