ಮುಷ್ಕರ ನಡೆಸಲು ಸಜ್ಜಾದ ಪೆಟ್ರೋಲ್ ಬಂಕ್ ಮಾಲೀಕರು
ಬೆಂಗಳೂರು, ಮಾ.3 : ಅಖಿಲ ಭಾರತ ಪೆಟ್ರೋಲ್ ಡೀಲರ್ಸ್ ಸಂಘ ಕಮೀಷನ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಂದು ದಿನದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಮಾ.16ರಂದು ಒಂದು ಪಾಳಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.
ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್ ಸಂಘದ ಅಧ್ಯಕ್ಷ ರವೀಂದ್ರ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಲವು ವರ್ಷಗಳಿಂದ ಶೇ.5ರಷ್ಟು ಕಮೀಷನ್ ನೀಡುವಂತೆ ಒತ್ತಾಯಿಸುತ್ತಿದ್ದರೂ ತೈಲ ಕಂಪನಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು. [ಪೆಟ್ರೋಲ್ ದರದಲ್ಲಿ ಹೆಚ್ಚಳ]

ಸಂಘ ಬೇಡಿಕೆ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದೆ. ಆದರೆ, ಸರ್ಕಾರವೂ ಸ್ಪಂದಿಸದ ಕಾರಣ ಮಾ.10ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ. ಅಂದು ಪೆಟ್ರೋಲ್ ಮತ್ತು ಡೀಸೆಲ್ ದೊರೆಯುವುದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಮುಷ್ಕರಕ್ಕೆ ಸ್ಪಂದಿಸದಿದ್ದರೆ ಮಾ.16ರಂದು ಒಂದು ಪಾಳಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಬಂಕ್ ಮಾಲೀಕರು ನಿರ್ಧರಿಸಿದ್ದಾರೆ. ನಗರದ ಒಳಭಾಗದ ಬಂಕ್ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಹಾಗೂ ನಗರ ಹೊರವಲಯದ ಬಂಕ್‌ಗಳು ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ರವೀಂದ್ರ ತಿಳಿಸಿದರು.
ಸದ್ಯ, ಪೆಟ್ರೋಲ್‌ಗೆ 2 ರೂ. ಮತ್ತು ಡೀಸೆಲ್‌ಗೆ 1 ರೂ. ಲಾಭಾಂಶ ನೀಡಲಾಗುತ್ತಿದೆ. ಇದರಿಂದ ಬಂಕ್ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಶೇ.5ರಷ್ಟು ಕಮೀಷನ್ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ತೈಲ ಕಂಪನಿಗಳು ಮತ್ತು ಸರ್ಕಾರ ಸ್ಪಂದಿಸಿಲ್ಲ ಎಂದು ರವೀಂದ್ರ ಆರೋಪಿಸಿದರು.












Click it and Unblock the Notifications