ಕೇರಳ ಶಾಲೆಯಲ್ಲಿ 105 ವರ್ಷಗಳ ಹಿಂದೆಯೇ ಇತ್ತು ಋತುಚಕ್ರದ ರಜೆ

By: ವಿಕಾಸ್ ನಂಜಪ್ಪ
Subscribe to Oneindia Kannada

ತಿರುವನಂತಪುರಂ, ಆಗಸ್ಟ್ 21: ಕೇರಳದಲ್ಲೀಗ ಋತುಚಕ್ರದ ರಜೆಯದ್ದೇ ಚರ್ಚೆ. ಅಲ್ಲಿನ 'ಮಾತೃಭೂಮಿ' ಚಾನಲ್ ತನ್ನ ಸಿಬ್ಬಂದಿಗಳಿಗೆ ಪೀರಿಯಡ್ ಲೀವ್ ನೀಡಿದ ಬಳಿಕ ಸರಕಾರಿ ಉದ್ಯೋಗದಲ್ಲಿಯೂ ಈ ರಜೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯೋನ್ಮುಖರಾಗಿದ್ದಾರೆ.

ಋತುಸ್ರಾವ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ಖಾಸಗಿ ಕಂಪೆನಿ ರಜಾ ಘೋಷಣೆ

ಇವೆಲ್ಲದರ ಮಧ್ಯೆ ಕೇರಳದ ಶಾಲೆಯೊಂದರಲ್ಲಿ ಶತಮಾನದ ಹಿಂದೆಯೇ ಋತುಚಕ್ರದ ದಿನಗಳಲ್ಲಿ ರಜೆ ಕೊಡುವ ಪದ್ಧತಿ ಇತ್ತು ಎಂಬುದು ಬೆಳಕಿಗೆ ಬಂದಿದೆ.

Period leave: This Kerala school had granted it 105 years back

ಈಗಿನ ಎರ್ನಾಕುಲ ಜಿಲ್ಲೆಯಲ್ಲಿ, ಹಿಂದಿನ ಕೊಚ್ಚಿ ಸಂಸ್ಥಾನದ ಆಳ್ವಿಕೆಯ ದಿನಗಳಲ್ಲಿ ತ್ರಿಪುಣಿತರ ಎಂಬ ಊರಿನ ಶಾಲೆಯಲ್ಲಿ ಇಂಥಹದ್ದೊಂದು ಪದ್ಧತಿ ಇತ್ತು. 1912ರಲ್ಲೇ ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆ ಸಂದರ್ಭ ವಿದ್ಯಾರ್ಥಿನಿಯರಿಗೆ ಋತುಚಕ್ರದ ದಿನಗಳಲ್ಲಿ ರಜೆ ನೀಡಿ, ಆ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿತ್ತು.

ಕೇರಳದ ಇತಿಹಾಸಕಾರ ಪಿ. ಭಾಸ್ಕರನುಣ್ಣಿ ಎಂಬುವರು 'ಕೇರಳ ಇನ್‌ ದ ನೈಂಟೀನ್ತ್‌ ಸೆಂಚುರಿ' (19ನೇ ಶತಮಾನದ ಕೇರಳ) ಎಂಬ ಪುಸ್ತಕ ಬರೆದಿದ್ದು ಈ ಪುಸ್ತಕದಲ್ಲಿ ಋತುಚಕ್ರದ ರಜೆಯ ವಿಚಾರದ ಬಗ್ಗೆ ವಿಶೇಷ ಗಮನ ಸೆಳೆದಿದ್ದಾರೆ.

ಈ ಪುಸ್ತಕದ ಪ್ರಕಾರ ಆಗಿನ ಶಾಲೆಯ ಮುಖ್ಯೋಪಾಧ್ಯಾಯ ವಿ. ಪಿ. ವಿಶ್ವನಾಥ ಅಯ್ಯರ್‌ ಎನ್ನುವವರು ತ್ರಿಶ್ಶೂರಿನಲ್ಲಿರುವ ಶಾಲಾ ಮೇಲುಸ್ತುವಾರಿ ಅಧಿಕಾರಿಗಳನ್ನು ಸಂಪರ್ಕಿಸಿ, 'ಆ' ದಿನಗಳಲ್ಲಿ ಮಹಿಳಾ ಶಿಕ್ಷಕಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ರಜೆ ನೀಡಬೇಕು ಎಂದು ಕೋರಿಕೊಂಡಿದ್ದರು. 'ಆ' ದಿನಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಗೈರಾಗುತ್ತಾರೆ. ಹೀಗಾಗಿ ರಜೆ ನೀಡಬೇಕು ಎಂದು 1912ರ ಜ. 19ರಂದು ಮನವಿ ಮಾಡಿದ್ದರು.

ಇದಾಗಿ ಐದೇ ದಿನಗಳಲ್ಲಿ ಅಂದರೆ ಜನವರಿ 24ರಲ್ಲಿ ಋತುಚಕ್ರದ ದಿನಗಳಲ್ಲಿ ರಜೆ ನೀಡುವ ಆದೇಶ ಪ್ರಕಟವಾಗಿತ್ತು. ಋತುಚಕ್ರದ ರಜೆ ಮಾಡಿದವರಿಗೆ ಬೇರೆಯ ದಿನ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು

ಕೇರಳ ಸಾಹಿತ್ಯ ಪರಿಷತ್ 1988ರಲ್ಲಿ ಪ್ರಕಟಿಸಿರುವ 'ಕೇರಳ ಇನ್‌ ದ ನೈಂಟೀನ್ತ್‌ ಸೆಂಚುರಿ' ಪುಸ್ತಕದಲ್ಲಿ ಈ ಎಲ್ಲಾ ವಿಚಾರಗಳು ದಾಖಲಾಗಿವೆ. ಇದೊಂದು ಅಧಿಕೃತ ಅಧ್ಯಯನ ಪುಸ್ತಕವಾಗಿದ್ದು ದಕ್ಷಿಣ ಭಾರತದ ಅಂದಿನ ಶಿಕ್ಷಣ, ಕೃಷಿ, ಸಂಸ್ಕೃತಿ, ಜೀವನಶೈಲಿ, ಕೌಟುಂಬಿಕ ರಚನೆ, ದೇವಸ್ಥಾನಗಳು, ಆಡಳಿತ, ಆಚರಣೆ ಮೊದಲಾದ ವಿಚಾರಗಳ ಬಗ್ಗೆ ಮಾತನಾಡುತ್ತದೆ.

"ಋತುಚಕ್ರದ ಬಗ್ಗೆ ಬಹಿರಂಗವಾಗಿ ಮಾತನಾಡುವುದೇ ಕಳಂಕ ಎನ್ನುವ ದಿನಮಾನಗಳಲ್ಲಿ ಮೇಲ್ಜಾತಿಗೆ ಸೇರಿದ್ದ ವಿಶ್ವನಾಥ ಅಯ್ಯರ್‌ ಈ ಬಗ್ಗೆ ಮುತುವರ್ಜಿ ವಹಿಸಿ ರಜೆ ಪಡೆಯುವ ಅವಕಾಶ ಸೃಷ್ಟಿಸಿದ್ದೇ ಒಂದು ಕೌತುಕ,"ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amidst the debate on period leave, a school in Kerala had granted this relief to girl students over 100 years back. The Government Girls School in Tripunithura, located in the erstwhile princely state of Cochin (present Ernakulam district), had in 1912 allowed students to take “period leave” during the time of their annual examination and permitted them to write it later.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ