ಕೋವಿಡ್‌ನಿಂದ ಗುಣಮುಖರಾದವರು ಎಂದು ಲಸಿಕೆ ಪಡೆಯಬೇಕು?
ನವದೆಹಲಿ, ಮೇ 13; ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಗೆ ದೇಶದಲ್ಲಿ ಈಗ ಭಾರೀ ಬೇಡಿಕೆ ಇದೆ. ವಿವಿಧ ರಾಜ್ಯಗಳು ಲಸಿಕೆ ಕೊರತೆ ಎದುರಿಸುತ್ತಿವೆ. ಯಾರು, ಯಾವಾಗ ಲಸಿಕೆ ಪಡೆಯಬೇಕು ಎಂದು ಹಲವಾರು ಚರ್ಚೆಗಳು ನಡೆಯುತ್ತಿವೆ.
ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್‌ಟಿಎಜಿಐ) ಕೇಂದ್ರ ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದೆ. ಈಗಾಗಲೇ ಕೋವಿಡ್ ಸೋಂಕು ತಗುಲಿ ಗುಣಮುಖರಾದವರು ಯಾವಾಗ ಲಸಿಕೆ ಪಡೆಯಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.
ಕೋವಿಡ್ ಸೋಂಕು ತಗುಲಿ ಗುಣಮುಖರಾದ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದಿನ ಆರು ತಿಂಗಳವರೆಗೂ ಮುಂದೂಡುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಆಯ್ಕೆಗೆ ಅವಕಾಶ ಕಲ್ಪಿಸಬಹುದು. ಗರ್ಭವತಿ ಮಗುವಿಗೆ ಜನ್ಮ ನೀಡಿದ ಬಳಿಕ ಯಾವುದೇ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಎನ್‌ಟಿಎಜಿಐ ತನ್ನ ಶಿಫಾರಸಿನಲ್ಲಿ ಹೇಳಿದೆ.
ವ್ಯಕ್ತಿಯು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 12 ರಿಂದ 16 ವಾರಗಳಲ್ಲಿ 2ನೇ ಡೋಸ್ ಹಾಕಿಸಿಕೊಳ್ಳಲು ಸಮಿತಿ ಶಿಫಾರಸು ಮಾಡಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆ ಮಾಡಲು ಸಮಿತಿ ಶಿಫಾರಸು ಮಾಡಿಲ್ಲ.
ಕೇಂದ್ರ ಸರ್ಕಾರ ಮೇ 1ರಿಂದ ದೇಶದಲ್ಲಿ 18-44 ವಯೋಮಿತಿಯವರು ಲಸಿಕೆ ಪಡೆಯಲು ಅವಕಾಶ ನೀಡಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟವರು ಮೊದಲ ಡೋಸ್, ಎರಡನೇ ಡೋಸ್ ಪಡೆದಿದ್ದಾರೆ. ಹಲವು ರಾಜ್ಯಗಳಲ್ಲಿ ಈಗ ಲಸಿಕಾಕರಣ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ.












Click it and Unblock the Notifications