ಸೂರ್ಯ ನಮಸ್ಕಾರ ವಿರೋಧಿಗಳನ್ನು ಕೂಪಕ್ಕೆ ತಳ್ಳಿ: ಯೋಗಿ
ನವದೆಹಲಿ, ಜೂ.09: ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಕೂಡಾ ಒಂದು ಚಟಾಕಿ ಹಾರಿಸಿದ್ದಾರೆ. ವಿಶ್ವ ಯೋಗ ದಿನಾಚರಣೆಗೂ ಮುನ್ನ 'ಸೂರ್ಯ ನಮಸ್ಕಾರ' ಕುರಿತಂತೆ ಉಂಟಾಗಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸೂರ್ಯ ನಮಸ್ಕಾರ ವಿರೋಧಿಗಳನ್ನು ಕತ್ತಲ ಕೂಪಕ್ಕೆ ತಳ್ಳಿ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದಂದು 100 ಕ್ಕೂ ಹೆಚ್ಚು ದೇಶಗಳು ಸೂರ್ಯ ನಮಸ್ಕಾರ, ಯೋಗ ಮಾಡಲು ಒಪ್ಪಿಗೆ ಸೂಚಿಸಿದೆ. ಈ 100 ದೇಶಗಳಲ್ಲಿ 40 ದೇಶಗಳು ಮುಸ್ಲಿಂ ಸಮುದಾಯದ ದೇಶಗಳಾಗಿವೆ ಎಂದರು.

ಸೂರ್ಯ ನಮಸ್ಕಾರ ಎಂಬುದು ಯೋಗದ ಒಂದು ಭಾಗ. ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಹಾಗೂ ಮನಸ್ಸು ಶುದ್ಧಗೊಳ್ಳುತ್ತದೆ. ಸೂರ್ಯ ಎಂದಿಗೂ ಜಾತಿ, ಧರ್ಮ ಎಂದು ಭೇದ ಮಾಡಿ ಬೆಳಕು ನೀಡುವುದಿಲ್ಲ. ಸೂರ್ಯ ನಮಸ್ಕಾರ ವಿರೋಧಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.
ಅಂತಾರಾಷ್ಟ್ರೀಯ ಯೋಗದಿನದಂದು ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಹಾಗೂ ಯೋಗ ಕಡ್ಡಾಯ ಕುರಿತಂತೆ ಮುಸ್ಲಿಂ ಕಾನೂನು ಬೊರ್ಡ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಇಸ್ಲಾಂ ಬೋಧನೆಗೆ ವಿರೋಧವಾಗಿರುವ ಯೋಗಭ್ಯಾಸವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ ಎಂದು ಮುಸ್ಲಿಮ್ ಮುಖಂಡರು ಹೇಳಿದ್ದಾರೆ. ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಗೂ ಮುನ್ನ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications