ಈ ವರ್ಷ ಪವನ್ ಕಲ್ಯಾಣ್ 'ಸಿನಿಮಾ ಕೆರಿಯರ್' ಅಂತ್ಯ?
ರಾಜಕೀಯವಾಗಿ ಸಕ್ರಿಯವಾಗಲು ಸಿನಿಮಾ ವೃತ್ತಿಜೀವನ ಅಡ್ಡಿಯಾದರೆ ತಾವು ನಟನೆಯನ್ನು ಬಿಡುವುದಾಗಿ ಈ ಹಿಂದೆ ನಟ ಪವನ್ ಕಲ್ಯಾಣ್ ಹಲವಾರು ಬಾರಿ ಹೇಳಿರುವುದರಿಂದ ಮುಂದಿನ ವರ್ಷ ಅವರು ಫುಲ್ ಟೈಂ ರಾಜಕಾರಣಿ ಆಗಲಿದ್ದಾರೆಂದು ಹೇಳಲಾಗುತ್ತಿದೆ.
ಹೈದರಾಬಾದ್, ಮೇ 29: ಕಳೆದ ಕೆಲವು ವರ್ಷಗಳಿಂದ ತಾವು ರಾಜಕೀಯ ಸೇರುವ ಇಚ್ಛೆಯನ್ನು ವ್ಯಕ್ತಪಡಿಸುತ್ತಲೇ ಬಂದಿರುವ ತೆಲುಗು ಚಿತ್ರ ನಟ ಪವನ್ ಕಲ್ಯಾಣ್ ಅವರು, ಇದೇ ವರ್ಷ ತಮ್ಮ ಸಿನಿಮಾ ವೃತ್ತಿಜೀವನಕ್ಕೆ ತಾತ್ಕಾಲಿಕ ತಿಲಾಂಜಲಿ ಇಟ್ಟು, ಅಧಿಕೃತವಾಗಿ ರಾಜಕೀಯ ಕ್ಷೇತ್ರಕ್ಕೆ ಅಡಿಯಿಡುವ ಸೂಚನೆ ನೀಡಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ.
ಸದ್ಯಕ್ಕೀಗ, ಅವರು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು,ಆ ಚಿತ್ರ ಪೂರ್ಣಗೊಂಡ ನಂತರ, ಅವರು ಅಧಿಕೃತವಾಗಿ ತಮ್ಮ ಕಚೇರಿಯೊಂದನ್ನು ಸ್ಥಾಪಿಸಲಿದ್ದಾರೆಂಬ ಮಾತುಗಳು ತೆಲುಗು ಚಿತ್ರರಂಗದಲ್ಲಿ ಕೇಳಿಬಂದಿವೆ. ಆ ಮೂಲಕ, 2019ರಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಇರಾದೆಯನ್ನು ಅವರು ಹೊಂದಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ.[ಮೋದಿಯಿಂದ ಪ್ರೇರಿತ, 2019ರ ಚುನಾವಣೆಗೆ ಪವನ್ ಎಂಟ್ರಿ!]

2014ರಲ್ಲಿ ಅವರು ಜನ ಸೇನಾ ಎಂಬ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಲ್ಲದೆ, ಆ ವರ್ಷ ನಡೆದಿದ್ದ ವಿಧಾನಸಭೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಬಿಜೆಪಿ-ಟಿಡಿಪಿ ಪಕ್ಷಗಳ ಮೈತ್ರಿಯನ್ನು ಬೆಂಬಲಿಸಿದ್ದರು. ಆದರೆ, ಅವರು ಆಗ ಚುನಾವಣೆಗೆ ನಿಂತಿರಲಿಲ್ಲ.
ಈ ಬಾರಿ, ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಹಾಗೂ ಬಿಜೆಪಿ ಪಕ್ಷಗಳು ಪುನಃ ಮೈತ್ರಿ ಸ್ಥಾಪಿಸುವ ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ, ಆಂಧ್ರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ, ರಾಜಕೀಯದಲ್ಲಿ ಸಂಪೂರ್ಣವಾಗಿ ಕಣಕ್ಕಿಳಿಯಲು ಅವರು ನಿರ್ಧರಿಸಿದ್ದಾರೆ.












Click it and Unblock the Notifications