ವಂದೇ ಭಾರತ್ ರೈಲಿನಲ್ಲಿ ಇಷ್ಟೊಂದು ಗಲೀಜಾ? ತುಕ್ಕು ಹಿಡಿದ ಶೌಚಾಲಯದ ಫೋಟೋ ಹಂಚಿಕೊಂಡ ಪ್ರಯಾಣಿಕ, ರೈಲ್ವೆ ಇಲಾಖೆ ಸ್ಪಷ್ಟನೆ
ಭಾರತೀಯ ರೈಲ್ವೆಯ ಹೆಮ್ಮೆಯ ರೈಲು ಎಂದೇ ಕರೆಸಿಕೊಳ್ಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ವೇಗ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ಪ್ರಯಾಣಿಕರೊಬ್ಬರು ಈ ಪ್ರತಿಷ್ಠಿತ ರೈಲಿನಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ರೈಲಿನ ಶೋಚನೀಯ ಸ್ಥಿತಿ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರೈಲಿನ ಒಳಾಂಗಣ ಗಲೀಜಾಗಿದ್ದು, ಶೌಚಾಲಯಗಳು ತುಕ್ಕು ಹಿಡಿದಿರುವ ಫೋಟೋಗಳು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿವೆ.

ಪ್ರಯಾಣಿಕನಿಗೆ ಎದುರಾದ ಕಹಿ ಅನುಭವ
ಅಕ್ಟೋಬರ್ 2ರಂದು ಹಿಮಾಂಶು ಮುಖರ್ಜಿ ಎಂಬ ಪ್ರಯಾಣಿಕರು 26901 ಸಂಖ್ಯೆಯ ಸಾಬರಮತಿ ಮತ್ತು ವೆರಾವಲ್ ನಡುವೆ ಸಂಚರಿಸುವ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ರೈಲಿನ ನಿರ್ವಹಣೆ ತೀರಾ ಕಳಪೆಯಾಗಿರುವುದನ್ನ ಗಮನಿಸಿದ ಅವರು, ಅದರ ಫೋಟೋಗಳನ್ನ ತೆಗೆದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಭಾರತದಾದ್ಯಂತ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿ ಇದು ಅತ್ಯಂತ ಕೊಳಕಾದ ರೈಲು ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ.
ರೈಲಿನ ಹೊರಭಾಗ ಗಲೀಜಾಗಿದೆ, ಗಾಜುಗಳು ಒಡೆದಿವೆ ಮತ್ತು ಶೌಚಾಲಯಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಭಾರತೀಯ ರೈಲ್ವೆಯ ಈ ಪ್ರಮುಖ ರೈಲಿನಲ್ಲಿ ಇಂತಹ ದೃಶ್ಯವನ್ನು ನೋಡುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದು ಬರೆದುಕೊಂಡು ಪಶ್ಚಿಮ ರೈಲ್ವೆ ಹಾಗೂ ರೈಲ್ವೆ ಸಚಿವಾಲಯವನ್ನ ಟ್ಯಾಗ್ ಮಾಡಿದ್ದರು.
ತ್ವರಿತವಾಗಿ ಸ್ಪಂದಿಸಿದ ರೈಲ್ವೆ ಇಲಾಖೆ
ಹಿಮಾಂಶು ಅವರ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದ್ದಂತೆ, ಅಹಮದಾಬಾದ್‌ನ ಡಿಆರ್‌ಎಂ ಅಧಿಕೃತ ಖಾತೆಯಿಂದ ತಕ್ಷಣವೇ ಪ್ರತಿಕ್ರಿಯೆ ನೀಡಲಾಗಿದೆ. "ಮಾನ್ಯರೇ, ನಿಮ್ಮ ಪ್ರತಿಕ್ರಿಯೆಯನ್ನ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ನೀವು ತೋರಿಸಿರುವ ನಿರ್ದಿಷ್ಟ ಸ್ಥಳಗಳ ಸ್ಥಿತಿ ನಿಜಕ್ಕೂ ಸ್ವೀಕಾರಾರ್ಹವಲ್ಲ ಮತ್ತು ಇದು ನಮ್ಮ ಗುಣಮಟ್ಟಕ್ಕಿಂತ ಕೆಳಗಿದೆ. ಆದರೆ, ಇದು ಕೇವಲ ಒಂದು ಪ್ರತ್ಯೇಕ ಘಟನೆಯಾಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ, ಪ್ರಯಾಣಿಕರ ದೂರಿನ ಬೆನ್ನಲ್ಲೇ ನಿರ್ವಹಣಾ ಸಿಬ್ಬಂದಿ ಆ ನಿರ್ದಿಷ್ಟ ಸ್ಥಳಗಳಿಗೆ ಭೇಟಿ ನೀಡಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಿದ ಬಳಿಕದ ಫೋಟೋಗಳನ್ನ ಸಹ ರೈಲ್ವೆ ಇಲಾಖೆ ಹಂಚಿಕೊಂಡಿದೆ.
Sir, the inconvenience caused is deeply regretted. Onboard cleaning staff attended to and resolved your complaint. We remain committed to providing a pleasant and comfortable journey to all passengers. pic.twitter.com/zRPRRT1Yrh
— DRM Ahmedabad (@drmadiwr) October 2, 2026
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ರೈಲ್ವೆ ಇಲಾಖೆಯ ಕಳಪೆ ನಿರ್ವಹಣೆಯನ್ನ ಟೀಕಿಸಿದರೆ, ಇನ್ನು ಕೆಲವರು ಇದಕ್ಕೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
"ರೈಲುಗಳು ಗಲೀಜಾಗಿರಲು ಜನರೂ ಕೂಡ ಕಾರಣ. ರೈಲ್ವೆ ಇಲಾಖೆಯನ್ನು ದೂಷಿಸಿ ಪ್ರಯೋಜನವಿಲ್ಲ. ಜನರಿಗೆ ನಾಗರಿಕ ಪ್ರಜ್ಞೆ ಇಲ್ಲದಿದ್ದರೆ ಇಲಾಖೆ ಮಾತ್ರ ಏನು ಮಾಡಲು ಸಾಧ್ಯ?" ಎಂದು ಓರ್ವ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, "ಜನರು ಪಾನ್ ಜಗಿದು ರೈಲಿನ ಕಿಟಕಿಗಳ ಮೇಲೆ ಉಗುಳುವುದನ್ನ ನಾನು ನೋಡಿದ್ದೇನೆ. ಇದು ಅಸಹ್ಯಕರ. ಇದು ನಮ್ಮಲ್ಲಿರುವ ನಾಗರಿಕ ಪ್ರಜ್ಞೆಯ ಕೊರತೆಯನ್ನ ತೋರಿಸುತ್ತದೆ" ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಕೆಲವರು, "ನಮ್ಮ ವ್ಯವಸ್ಥೆಗೆ ಕೇವಲ ಹೊಸತನ್ನ ನಿರ್ಮಿಸುವುದು ಮಾತ್ರ ಗೊತ್ತು, ಅದನ್ನು ನಿರ್ವಹಣೆ ಮಾಡುವುದು ಗೊತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನೇ ಆಗಲಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಆಸ್ತಿಯನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂಬುದನ್ನ ಈ ಘಟನೆ ಮತ್ತೊಮ್ಮೆ ನೆನಪಿಸಿದೆ.


Click it and Unblock the Notifications
