ರಷ್ಯಾ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪಾಕಿಸ್ತಾನಿ ಐಎಸ್‌ಐ ಏಜೆಂಟ್ ಕೆಲಸ!
ನಮ್ಮದೆ ದೇಶದ ಅಂಗವಾಗಿದ್ದ ಪಾಕಿಸ್ತಾನ ಇವತ್ತು ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಿದೆ. ಮಿತ್ರರಾಗಬೇಕಿದ್ದ ಎರಡು ದೇಶಗಳು ಶತ್ರುಗಳಾಗಿ ಎದುರು ಬದುರು ನಿಂತಿವೆ. ಅದೇ ಸಮಯದಲ್ಲಿ ಒಳಗೊಳಗೆ ಕುತಂತ್ರಗಳು ನಡೆಯುತ್ತಿದೆ. ಇಂತಹದ್ದೆ ಒಂದು ಘಟನೆ ಮತ್ತೆ ವರದಿಯಾಗಿದೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಐಎಸ್‌ಐ ಏಜೆಂಟ್ ಸತ್ಯೇಂದ್ರ ಸಿವಾಲ್ ಅವರನ್ನು ಯುಪಿಯ ಮೀರತ್‌ನಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ಸಿವಾಲ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಆರೋಪಿ ಸತ್ಯೇಂದ್ರ ಸಿವಾಲ್‌ನನ್ನು ಮೀರತ್‌ನಲ್ಲಿ ಬಂಧಿಸಲಾಗಿದೆ.

ಪಾಕಿಸ್ತಾನಿ ಐಎಸ್‌ಐ ಬಂಧನ
ಅಧಿಕಾರಿಗಳ ಪ್ರಕಾರ, ಆರೋಪಿ ಸತ್ಯೇಂದ್ರ ಸಿವಾಲ್ ಅವರು ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಸೇನಾ ಸಂಸ್ಥೆಗಳ ಕಾರ್ಯತಂತ್ರದ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಮುಖ ಗೌಪ್ಯ ಮಾಹಿತಿಯನ್ನು ಐಎಸ್‌ಐಗೆ ನೀಡುತ್ತಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಬಂಧಿತ ಸತ್ಯೇಂದ್ರ ಸಿವಾಲ್ 2021 ರಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಮೂಲದ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಐಎಸ್‌ಐ ಹ್ಯಾಂಡ್ಲರ್‌ಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉದ್ಯೋಗಿಗಳಿಗೆ ಗೌಪ್ಯ ಮಾಹಿತಿ ಪಡೆಯಲು ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಯುಪಿ ಎಟಿಎಸ್‌ಗೆ ಹಲವು ಮೂಲಗಳಿಂದ ಗುಪ್ತಚರ ಮಾಹಿತಿ ದೊರೆತ ನಂತರ ಈ ಘಟನೆ ಬೆಳಕಿಗೆ ಬಂದಿದೆ.
पाकिस्तानी खुफिया एजेंसी ISI के लिए जासूसी करने वाले एजेंट, भारतीय दूतावास मास्को, रूस में नियुक्त कर्मचारी को #UPATS द्वारा गिरफ्तार करते हुए उसके कब्जे से 02 मोबाइल फोन, 01 आधार कार्ड, 01 पैन कार्ड, 01 पहचान पत्र व नकद रुपए बरामद किए गए हैं। #WellDoneCops #GoodJobATS pic.twitter.com/IMyjpAdbJt
— UP POLICE (@Uppolice) February 4, 2024
ಪೊಲೀಸರ ಪ್ರಕಾರ, ಈ ಮಾಹಿತಿಯು ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ. ಈ ಗುಪ್ತಚರ ಮಾಹಿತಿ ಬಳಿಕ ಪೊಲೀಸರು ಎಲೆಕ್ಟ್ರಾನಿಕ್ ಮತ್ತು ಭೌತಿಕ ಕಣ್ಗಾವಲು ಮೂಲಕ ತನಿಖೆಯನ್ನು ಪ್ರಾರಂಭಿಸಿದರು. ತನಿಖೆಯ ವೇಳೆ, ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿ ಸತ್ಯೇಂದ್ರ ಸಿವಾಲ್ ಭಾರತ ವಿರೋಧಿ ಜಾಲದಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ.
ಇದರ ನಂತರ, ಯುಪಿ ಎಟಿಎಸ್ ಸತ್ಯೇಂದ್ರ ಸಿವಾಲ್ ಅವರನ್ನು ವಿಚಾರಣೆಗೆ ಕರೆದಿದೆ. ವಿಚಾರಣೆಯ ಸಮಯದಲ್ಲಿ, ಸತ್ಯೇಂದ್ರ ಸಿವಾಲ್ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ತಾವು ಮಾಡುತ್ತಿದ್ದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪೊಲೀಸರು ಆರೋಪಿ ಸತ್ಯೇಂದ್ರ ಸಿವಾಲ್ ವಿರುದ್ಧ ಐಪಿಸಿ ಸೆಕ್ಷನ್ 121 ಎ (ದೇಶದ ವಿರುದ್ಧ ಯುದ್ಧ ಮಾಡುವುದು) ಮತ್ತು ಅಧಿಕೃತ ರಹಸ್ಯ ಕಾಯಿದೆ 1923 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications