ಈದ್ ಶುಭ ಕೋರುತ್ತಾ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಮುಕ್ತಗೊಳಿಸಿದ ಪಾಕ್
ನವದೆಹಲಿ, ಜೂನ್ 6: ಸುಮಾರು ಎರಡು ತಿಂಗಳ ನಂತರ, ಪಾಕಿಸ್ತಾನ, ತನ್ನ ವಾಯು ಪ್ರದೇಶ ಪ್ರವೇಶಿಸದಂತೆ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಬಾಲಾಕೋಟ್ ಉಗ್ರರ ನೆಲೆಯ ಮೇಲೆ, ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನ ತಮ್ಮತಮ್ಮ ವಾಯು ಪ್ರದೇಶವನ್ನು ಮುಚ್ಚಿದ್ದವು. ರಂಜಾನ್ ದಿನಕ್ಕೆ ಎರಡು ದಿನ ಮುನ್ನ ಪಾಕ್, ಭಾರತದ ವಿಮಾನ ಸಂಚಾರಕ್ಕೆ ತನ್ನ ವಾಯು ಪ್ರದೇಶವನ್ನು ತೆರೆದಿದೆ.
ದುಬೈ - ನವದೆಹಲಿ ಇಂಡಿಗೋ ವಿಮಾನವು, ಮಂಗಳವಾರ ತಡರಾತ್ರಿ (ಜೂ 4) ಪಾಕಿಸ್ತಾನದ ಟೆಲ್ಲೆಮ್ ವಾಯು ಪ್ರದೇಶದ ಮೂಲಕ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಇಂಡಿಗೋ ಕಚೇರಿಗೆ ಕರೆ ಮಾಡಿದ ಪಾಕ್ ನಾಗರಿಕ ವಿಮಾನಯಾನ ಸಚಿವಾಲಯ, 'ನಿಮ್ಮ ವಿಮಾನ, ಟೆಲ್ಲೆಮ್ ವಾಯುಮಾರ್ಗವಾಗಿ ಬರುವುದನ್ನು ನೋಡಿದೆವು, ನಿಮಗೆ ಈದ್ ಹಬ್ಬದ ಶುಭಾಶಯಗಳು' ಎಂದು ಶುಭ ಕೋರಿದೆ.
ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಟೆಲ್ಲೆಮ್ ಮಾರ್ಗವಾಗಿ ಸಂಚರಿಸಿದರೆ, ಎಲ್ಲಾ ಗಮ್ಯಸ್ಥಳವನ್ನು ನಿರ್ದಿಷ್ಟ ಸಮಯಕ್ಕಿಂತ ಇಪ್ಪತ್ತು ನಿಮಿಷ ಬೇಗ ತಲುಪಬಹುದಾಗಿದೆ, ಹಾಗೆಯೇ ಇಂಧನವೂ ಉಳಿತಾಯವಾಗಲಿದೆ ಎಂದು ಇಂಡಿಗೋ ಅಧಿಕಾರಿಗಳು ಹೇಳಿದ್ದಾರೆ.
ಎರಡು ದೇಶಗಳು ತಮ್ಮತಮ್ಮ ವಾಯು ಪ್ರದೇಶವನ್ನು ನಿರ್ಬಂಧಿಸಿದ್ದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿತ್ತು.












Click it and Unblock the Notifications