'ರೈತರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ಉದ್ದೇಶ ನಮ್ಮದಾಗಿತ್ತು' ಕೇಂದ್ರ ಕೃಷಿ ಸಚಿವ
ನವದೆಹಲಿ, ನವೆಂಬರ್ 19: ಪ್ರಧಾನಿ ಮೋದಿ ಇಂದು ಕೇಂದ್ರ ಸರ್ಕಾರ ತಂದ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಕೃಷಿ ಕಾನೂನುಗಳನ್ನು ಘೋಷಿಸಿದ ನಂತರ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ಹೋರಾಟವನ್ನು ಮಾಡಿದರು. ಸದ್ಯ ಮೋದಿ ಅವರ ಈ ಘೋಷಣೆಯಿಂದಾಗಿ ರೈತರಲ್ಲಿ ಸಂತೋಷದ ಅಲೆ ಮೂಡಿದೆ. ಒಂದು ವರ್ಷದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಜನರಿಗೆ ಲಡ್ಡು, ಸಿಹಿ ಹಂಚಲಾಗುತ್ತಿದೆ. ಸಂಸತ್ತಿನಲ್ಲಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡುವುದಿಲ್ಲ ಎಂದು ರೈತ ಮುಖಂಡರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಇದೇ ಸಮಯದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಈ ಕೃಷಿ ಕಾನೂನುಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ರೈತರ ಪರವಾಗಿ ನಿಂತಿದೆ. ಈ ಹಿಂದೆಯೂ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಮೂಲಕ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಸರ್ಕಾರದ ಉದ್ದೇಶವನ್ನು ರೈತರು ಅರ್ಥಮಾಡಿಕೊಳ್ಳಲಾಗಲಿಲ್ಲ ಎಂದು ಅವರು ಹೇಳಿದರು. ಸ್ಥಳೀಯ ಸುದ್ದಿ ಮಾದ್ಯಮದೊಂದಿಗೆ ಮಾತನಾಡಿದ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರೈತರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ಉದ್ದೇಶ
ಈ ಹಿಂದೆ ಪ್ರಧಾನಿಯವರು ಸಂಸತ್ತಿನಲ್ಲಿ 3 ಮಸೂದೆಗಳನ್ನು ಅಂಗೀಕರಿಸಿದ್ದರು. ರೈತರಿಗೆ ಇದರಿಂದ ಲಾಭವಾಗುತ್ತಿತ್ತು. ಇದರ ಹಿಂದೆ ರೈತರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಸ್ಪಷ್ಟ ಉದ್ದೇಶವನ್ನು ಪ್ರಧಾನಿ ಹೊಂದಿದ್ದರು. ಆದರೆ ದೇಶದ ಕೆಲವು ರೈತರಿಗೆ ನಾವು ಪ್ರಯೋಜನಗಳನ್ನು ತಿಳಿಸಲು ವಿಫಲರಾಗಿದ್ದೇವೆ ಎಂದು ನನಗೆ ಬೇಸರವಾಗಿದೆ ಎಂದರು.

ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ
ಈ ಸುಧಾರಣೆಗಳ ಮೂಲಕ ಪ್ರಧಾನಿಯವರು ಕೃಷಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಆದರೆ ಕೆಲವು ಷರತ್ತುಗಳಿಂದಾಗಿ ಕೆಲವು ರೈತರು ಅದನ್ನು ವಿರೋಧಿಸಿದರು ಎಂದು ಅವರು ಹೇಳಿದರು. ನಾವು ಅವರೊಂದಿಗೆ ಚರ್ಚೆಯ ಹಾದಿ ಹಿಡಿದಾಗ ಮತ್ತು ಅವರ ಮನವೊಲಿಸಲು ಪ್ರಯತ್ನಿಸಿದಾಗ ನಾವು ಯಶಸ್ವಿಯಾಗಲಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದರು. ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ.

ರೈತರ ಹಿತದೃಷ್ಟಿ
ಸರಕಾರ ರೈತರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತೋಮರ್ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ರೈತರು ಮತ್ತು ಕೃಷಿಗೆ ಅವರ ಸರ್ಕಾರದ ಬದ್ಧತೆ ಇದೆ ಎಂಬುದಕ್ಕೆ ದೇಶವೇ ಸಾಕ್ಷಿಯಾಗಿದೆ ಎಂದು ಕೃಷಿ ಸಚಿವರು ಹೇಳಿದರು. ಇದರ ಪರಿಣಾಮವಾಗಿ ಕಳೆದ 7 ವರ್ಷಗಳಲ್ಲಿ ಕೃಷಿಗೆ ಅನುಕೂಲವಾಗುವ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಿರುವುದನ್ನು ನೀವು ನೋಡಿರಬೇಕು ಎಂದರು.

ಮೋದಿ ಮಹತ್ವದ ಘೋಷಣೆ
ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಉತ್ತರ ಪ್ರದೇಶ ಪ್ರವಾಸಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ, ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು. ಆದರೆ ಈ ಯೋಜನೆ ಉದ್ದೇಶ ಕೆಲವರಿಗೆ ಅರ್ಥವಾಗಲಿಲ್ಲ. ನಾವು ಅರ್ಥೈಯಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದರು.