ಓಮಿಕ್ರಾನ್ ಆತಂಕ: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ವಿಸ್ತರಿಸಿದ ಭಾರತ
ನವದೆಹಲಿ, ಡಿಸೆಂಬರ್ 10: ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಆತಂಕದ ನಡುವೆ ಭಾರತವು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಗಳ ಮೇಲೆ ಹೇರಿದ್ದ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಣೆ ಮಾಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ತಿಳಿಸಿದೆ.
ಆದರೆ ಈ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಕಾರ್ಗೊ ವಿಮಾನಗಳಿಗೆ ಹಾಗೂ ನಿರ್ದಿಷ್ಟವಾಗಿ ಅನುಮೋದಿಸಲಾದ ವಿಮಾನಗಳಿಗೆ ಈ ನಿಷೇಧವು ಅನ್ವಯ ಆಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಭಾರತದಲ್ಲಿ ಮಾರ್ಚ್ 25, 2020 ರಿಂದ ಮೇ 24, 2020 ರವರೆಗೆ ನಿಗದಿತ ದೇಶೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಲಾಕ್‌ಡೌನ್ ಆದ ಸಂದರ್ಭದಲ್ಲಿ ದೇಶದಲ್ಲಿ ನಿಷೇಧ ಮಾಡಲಾಗಿದ್ದ ಅಂತಾರಾಷ್ಟ್ರೀಯ ವಿಮಾನವನ್ನು ಡಿಸೆಂಬರ್ 15 ರಿಂದ ಮತ್ತೆ ಆರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಈ ಹಿಂದೆ ತಿಳಿಸಿದ್ದವು.

ಆದರೆ ಹೊಸ ಕೋವಿಡ್ ರೂಪಾಂತರದ ಹಿನ್ನೆಲೆಯಿಂದಾಗಿ 14 ದೇಶಗಳಿಗೆ ಈಗಲೂ ನಿರ್ಬಂಧವನ್ನು ವಿಧಿಸಿತ್ತು. ಈ ವರ್ಷ ಕೊನೆಯಾಗುವಷ್ಟದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸಹಜ ಸ್ಥಿತಿಗೆ ಬರುವ ಭರವಸೆಯನ್ನು ಕೇಂದ್ರ ವಾಯುಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಾಲ್ ವ್ಯಕ್ತಪಡಿಸಿದ್ದರು.
ಆದರೆ ಓಮಿಕ್ರಾನ್ ರೂಪಾಂತರವು ಕಾಣಿಸಿಕೊಂಡ ಹಿನ್ನೆಲೆ ದೇಶವು ಮತ್ತೆ ನಿರ್ಬಂಧವನ್ನು ಕಠಿಣಗೊಳಿಸಬೇಕಾದ ಪರಿಸ್ಥಿತಿ ಬಂದಿದೆ. ಸಸಈ ಹಿನ್ನೆಲೆಯಿಂದಾಗಿ ಡಿಸೆಂಬರ್ 15 ರಿಂದ ಆರಂಭ ಆಗಲಿದ್ದ ವಿಮಾನ ಸಂಚಾರವನ್ನು ರದ್ದು ಮಾಡಿತ್ತು. ಆದೇಶವನ್ನು ಮತ್ತೆ ಪರಿಷ್ಕರಣೆ ಮಾಡಿ, ನಿಷೇಧವನ್ನು ಮುಂದುವರಿಸಿತ್ತು. ಈಗ ಈ ನಿಷೇಧವನ್ನು ವಿಸ್ತರಣೆ ಮಾಡಲಾಗಿದೆ.
ಅಪಾಯದ ದೇಶಗಳ ಪಟ್ಟಿಯಿಂದ ಸಿಂಗಪುರ ಹೊರಕ್ಕೆ
ಇನ್ನು ಓಮಿಕ್ರಾನ್ ಕಾಣಿಸಿಕೊಂಡ ಬೆನ್ನಲ್ಲೇ ದೇಶದಲ್ಲಿ ಪ್ರಮುಖ ಮುಂಜಾಗ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಸುಮಾರು ಹಲವಾರು ದೇಶಗಳನ್ನು ಅಪಾಯದ ರಾಷ್ಟ್ರ ಎಂದು ಗುರುತಿಸಲಾಗಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನ, ಚೀನಾ, ಘಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾವೆ, ಟಾಂಜಾನಿಯಾ, ಹಾಂಗ್‌ಕಾಂಗ್, ಇಸ್ರೇಲ್, ಸಿಂಗಾಪುರವನ್ನು ಅಪಾಯಯುತ ದೇಶ ಎಂದು ಗುರುತು ಮಾಡಲಾಗಿದೆ. ಆದರೆ ಈಗ ಸರ್ಕಾರವು ಸಿಂಗಾಪುರವನ್ನು ಈ ಪಟ್ಟಿಯಿಂದ ಹೊರಗಿರಿಸಿದೆ. ಈ ನಡುವೆ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಹೆಚ್ಚಳವಾಗುತ್ತಿದೆ. ವಿಶ್ವದಾದ್ಯಂತ 33 ಕ್ಕೂ ಅಧಿಕ ದೇಶಗಳಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ ಪತ್ತೆಯಾಗಿದೆ.
ಈಗಾಗಲೇ ಸಾವಿರಾರು ಕೋಟಿ ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳು
ದೇಶದಲ್ಲಿ ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಿಂದಾಗಿ ಲಾಕ್‌ಡೌನ್ ಮಾಡಲಾಗಿತ್ತು, ಹಾಗೆಯೇ ಈ ಸಂದರ್ಭದಲ್ಲಿ ವಿಮಾನಯಾನವನ್ನು ರದ್ದು ಮಾಡಲಾಗಿದೆ. ಈ ಕಾರಣದಿಂದಾಗಿ ಭಾರತದ ವಿಮಾನಯಾನ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್, "2020-21ರಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಭಾರೀ ನಷ್ಟ ಅನುಭವಿಸಿದೆ. ಭಾರತದ ವಿಮಾನಯಾನ ಸಂಸ್ಥೆಗಳಿಗೆ 19,564 ಕೋಟಿ ನಷ್ಟ ಉಂಟಾಗಿದ್ದರೆ, ಭಾರತದ ವಿಮಾನ ನಿಲ್ದಾಣಗಳಿಗೆ 5,116 ಕೋಟಿ ರೂಪಾಯಿ ನಷ್ಟ ಉಂಟಾಗಿದೆ," ಎಂದು ವಿವರಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್, "ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಉಂಟಾದ ಅಡಚಣೆಯು ಭಾರತದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಭಾರೀ ದುಷ್ಪರಿಣಾಮವನ್ನು ಬೀರಿದೆ," ಎಂದು ತಿಳಿಸಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications