ಸಣ್ಣ ಕೋಣೆಯಲ್ಲಿ ಕೇಸರಿ ಬೆಳೆದು ಅಸಾಧ್ಯವಾದದ್ದನ್ನು ಸಾಧಿಸಿದ ಛಲಗಾತಿ! ಇದು ಲಕ್ಷ ಲಕ್ಷ ಆದಾಯದ ಕಥೆ
ವ್ಯವಸಾಯ, ಕೃಷಿಗೆ ಹವಾಮಾನ ಸದಾ ಪೂರಕವಾಗಿರಬೇಕು ಎಂಬ ಮಾತಿದೆ. ಅದರಲ್ಲೂ ಈ 'ಕೇಸರಿ' ಬೆಳೆಯಲು ಜಮ್ಮು-ಕಾಶ್ಮೀರ ಬಿಟ್ಟರೆ ಬೇರೆ ಕಡೆ ಅಷ್ಟು ಸುಲಭವಲ್ಲ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಮಹಿಳೆ 10x10 ಕೋಣೆಯಲ್ಲಿ ಕೇಸರಿ ಬೆಳೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಕೃಷಿ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ.
ಹೌದು, ಒಡಿಶಾದ ಜಾರ್ಸುಗುಡದಲ್ಲಿ, ಸುಜಾತಾ ಅಗರ್ವಾಲ್ ಎನ್ನುವವರು ಹವಾಮಾನಕ್ಕೆ ಸವಾಲು ಹಾಕಿ ಕೇಸರಿ ಬೆಳೆದು ತೋರಿಸಿದ್ದಾರೆ. ಇವರು ತಮ್ಮ ಮನೆಯಲ್ಲಿ 100 ಚದರ ಅಡಿ ಕೋಣೆಯೊಳಗೆ ಹೈಡ್ರೋಪೋನಿಕ್ ಶೈಲಿಯ ಒಳಾಂಗಣ ಕೃಷಿ ವ್ಯವಸ್ಥೆ ನಿರ್ಮಿಸಿ ಅಲ್ಲಿ ಕೇಸರಿ ಕೃಷಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹವಾಮಾನದ ಪೂರಕ ವಾತಾವರಣ ಅವಲಂಭಿಸದೇ ಕೇಸರಿ ಕೃಷಿ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.

10x10 ಕೊಠಡಿಯಲ್ಲಿ ಎರಡು ಹವಾನಿಯಂತ್ರಣ ಯಂತ್ರ ಇಟ್ಟು ಕೃತಕ ತಂಪು ಸೃಷ್ಟಿಸಿ ಕೇಸರಿ ಬೆಳೆದಿದ್ದಾರೆ. ಈ ರೀತಿ ಮಾಡಿದರೆ ಕೇಸರಿ ಬೆಳೆಯುವುದು ಅನುಮಾನ ಎಂದವರೇ ಕೊನೆಗೆ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಸದ್ಯ ಈ ವಿಚಾರವನ್ನು ಲಿಂಕ್ಡ್ ಇನ್‌ನಲ್ಲಿ 'ದಿ ಬೆಟರ್ ಇಂಡಿಯಾ' ಹ್ಯಾಂಡಲ್ ಶೇರ್ ಮಾಡಿಕೊಂಡಿದೆ.
ಕೋಣೆಯಲ್ಲಿ ಸಣ್ಣ ಕಾಶ್ಮೀರ ಮರುಸೃಷ್ಟಿ!
ಕೋಣೆಯಲ್ಲಿನ ಹವಾನಿಯಂತ್ರಣ ಸಾಧನೆಗಳು ನಿಯಂತ್ರಿತ ಆರ್ದ್ರತೆ, ಟ್ರೇಗಳು ಮತ್ತು ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ್ದಾರೆ. ಕಾಶ್ಮೀರದಲ್ಲಿ ಮಾತ್ರವೇ ಹೆಚ್ಚಾಗಿ ಬೆಳೆಯುವ ಈ ಕೇಸರಿಗೆ ಬೇಕಾದಷ್ಟು ಶೂನ್ಯಕ್ಕಿಂತ ಕಡಿಮೆ ತಂಪು ವ್ಯವಸ್ಥೆ ರೂಪಿಸಿದ್ದಾರೆ. ಇದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಕೋಣೆಯಲ್ಲಿ ಸಣ್ಣ ಕಾಶ್ಮೀರವನ್ನು ಮರುಸೃಷ್ಟಿಸಿದ್ದಾರೆ.
ಇದಕ್ಕು ಮುನ್ನ ಸುಜಾತಾ ಅವರು ಜಮ್ಮು ಮತ್ತು ಕಾಶ್ಮೀರದ ತಜ್ಞರನ್ನು ಸಂಪರ್ಕಿಸಿದ್ದರು. ಕೇಸರಿ ಕೃಷಿ ಮತ್ತು ತರಬೇತಿಯನ್ನು ಖುದ್ದು ಸಂಶೋಧಿಸಿದ್ದರು. ಬಳಿಕವೇ ಪ್ರಯೋಗಕ್ಕೆ ಮುಂದಾಗಿ ಯಶಸ್ಸು ಕಂಡಿದ್ದಾರೆ. 2023 ರಲ್ಲಿ ಮೋಗ್ರಾ ಕೇಸರಿ ಕಾರ್ಮ್‌ಗಳನ್ನು ಪಡೆದು ಅಲ್ಲಿಂದ ಕೋಣೆಯಲ್ಲಿ ಪ್ರಯೋಗ ಆರಂಭಿಸಿದರು.
ಮಣ್ಣಿನ ಹೊಲಗಳ ಬದಲಿಗೆ ಪೋಷಕಾಂಶ-ಸಮೃದ್ಧ ಬೆಳೆಯುವ ಮಾಧ್ಯಮದಿಂದ ತುಂಬಿದ ಪಾತ್ರೆಗಳಲ್ಲಿ ಕಾರ್ಮ್‌ಗಳನ್ನು ನೆಟ್ಟರು. ಹವಾನಿಯಂತ್ರಿತ ಪರಿಸರದೊಳಗೆ, ಕೇಸರಿ ನಿಧಾನವಾಗಿ ಹೊಂದಿಕೊಳ್ಳುತ್ತಾ ಹೋಯಿತು. ಕೆಲವು ತಿಂಗಳುಗಳ ನಂತರ, ಹೂವುಗಳು ಒಳಾಂಗಣದಲ್ಲಿ ಅರಳಲು ಪ್ರಾರಂಭಿಸಿದವು. ನಂತರ ಪ್ರತಿಯೊಂದು ಹೂವನ್ನು ಎಚ್ಚರಿಕೆಯಿಂದ ಕೈಯಿಂದ ಕೊಯ್ಲು ಮಾಡಿದ್ದಾರೆ. ಸೂಕ್ಷ್ಮವಾದ ಕೆಂಪು ಬಣ್ಣದ ಕಳಂಕಗಳನ್ನು ಬೇರ್ಪಡಿಸಿ ಕೇಸರಿಯನ್ನು ಉತ್ಪಾದಿಸಲು ಒಣಗಿಸಲು ಆರಂಭಿಸಿದರು.
ಇಷ್ಟು ಸಣ್ಣ ಕೋಣೆಯಲ್ಲಿ ₹10 ಲಕ್ಷ ಹೂಡಿಕೆ
ಕೇಸರಿಗೆ ಅಗತ್ಯವಾದ ವ್ಯವಸ್ಥೆ ಸ್ಥಾಪಿಸಲು ಸುಜಾತ ಅವರು ಸುಮಾರು 10 ಲಕ್ಷ ರೂಪಾಯಿ ಹಣ ವ್ಯಯಿಸಿದ್ದಾರೆ. ಅಕ್ಟೋಬರ್ 2025 ರ ಹೊತ್ತಿಗೆ, ಅವರು ಒಂದು ಬಾರಿಗೆ ಸುಮಾರು 7.5 ಲಕ್ಷ ರೂಪಾಯಿ ಮೌಲ್ಯದ ಸುಮಾರು 750 ಗ್ರಾಂ ಕೇಸರಿಯನ್ನು ಕೊಯ್ಲು ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಅವರು ಬ್ರ್ಯಾಂಡ್ "ಬ್ಲೂಮ್ ಇನ್ ಹೈಡ್ರೋ" ಹೆಸರಿನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಕೇಸರಿ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಇವರು ವಾರ್ಷಿಕವಾಗಿ 24 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ಈ ಮಹಿಳೆಯ ನಿರಂತರ ಶ್ರಮ, ಆಗದ್ದನ್ನು ಮಾಡಿ ತೋರಿಸಿದ ಜಾಣ್ಮೆ, ತಾಳ್ಮೆಗೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications
