ಒಡಿಶಾ ವಿಜಿಲೆನ್ಸ್ ಇತಿಹಾಸದಲ್ಲೇ ಅತಿ ದೊಡ್ಡ ದಾಳಿ: ಇಂಜಿನಿಯರ್ ಬಳಿ ಸಿಕ್ಕಿದ್ದೇನು?
ಕಟಕ್ ಮಾರ್ಚ್ 28: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಒಡಿಶಾದ ವಿಚಕ್ಷಣಾ ದಳ (Department of Vigilance)ಇತಿಹಾಸದಲ್ಲೇ ಬಹುದೊಡ್ಡ ದಾಳಿಯನ್ನು ಮಾಡಿದೆ. ಜೊತೆಗೆ ದೊಡ್ಡ ಮೊತ್ತದ ಹಣವನ್ನು ಪತ್ತೆ ಮಾಡಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಗ್ರಾಮೀಣ ಕಾಮಗಾರಿ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್(Superintending Engineer) ವಿರುದ್ಧ ಈ ದಾಳಿಯನ್ನು ಮಾಡಲಾಗಿದೆ. ಇವರ ಹಲವು ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಈ ದಾಳಿ ನಡೆಯುತ್ತಿದ್ದು, ಈವರೆಗೆ ಯಾವುದೇ ಹಣ ಪತ್ತೆಯಾಗಿರಲಿಲ್ಲ. ಆದರೆ ಮಾರ್ಚ್‌ನಲ್ಲಿ ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡುತ್ತಿರುವ ಸುದ್ದಿ ತಿಳಿದ ವಿಜಿಲೆನ್ಸ್‌ಗೆ ಕೊನೆಗೂ ಇವರಿಂದ ಅಧಿಕ ಹಣ ಸಿಕ್ಕಿಬಿದ್ದಿದೆ.
ಒಡಿಶಾ ವಿಜಿಲೆನ್ಸ್ ತನ್ನ ಇತಿಹಾಸದಲ್ಲಿ ಭ್ರಷ್ಟಾಚಾರದ ವಿರುದ್ಧ ಅತಿದೊಡ್ಡ ದಾಳಿಯನ್ನು ಮಾಡಿದೆ. ಸೂಪರಿಂಟೆಂಡಿಂಗ್ ಇಂಜಿನಿಯರ್ ವಶದಿಂದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ನಗದು, ಚಿನ್ನದ ನಾಣ್ಯಗಳು, ಆಭರಣಗಳು ಮತ್ತು ಬ್ಯಾಂಕ್‌ಗಳಲ್ಲಿನ ಠೇವಣಿ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಮನೆ, ಜಮೀನು ಕೂಡ ಪತ್ತೆಯಾಗಿದೆ. ವಿಜಿಲೆನ್ಸ್ ಇಲಾಖೆಯ ಶೋಧ ಕಾರ್ಯ ಮುಂದುವರೆದಿದ್ದು ವಸೂಲಿಯಾಗಲಿರುವ ಈ ಆಸ್ತಿ ಮತ್ತಷ್ಟು ಹೆಚ್ಚಾಗಬಹುದು.
ಒಡಿಶಾ ವಿಜಿಲೆನ್ಸ್ ಪ್ರಕಾರ, " ನಗದು ಮತ್ತು ಚಿನ್ನದ ಜೊತೆಗೆ ಬ್ಯಾಂಕ್ ಎಫ್‌ಡಿಗಳು, ಉಳಿತಾಯ, ವಿಮೆ ಸಂಬಂಧಿಸಿದಂತೆ ಇನ್ನೂ ಹಲವು ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ 2 ಬ್ಯಾಂಕ್ ಲಾಕರ್ ಗಳ ತನಿಖೆ ನಡೆಯಬೇಕಿದೆ. ಹೀಗಾಗಿ ಸದ್ಯ ಪತ್ತೆ ಮಾಡಲಾದ ಆಸ್ತಿಗಿಂತಲೂ ಈ ಆಸ್ತಿ ಮತ್ತಷ್ಟು ಹೆಚ್ಚಾಗಬಹುದು' ಎಂದು ವಿಜಿಲೆನ್ಸ್ ಹೇಳಿದೆ.

ಒಡಿಶಾ ವಿಜಿಲೆನ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ವಸೂಲಿ
ಒಡಿಶಾದ ನಕ್ಸಲ್ ಪೀಡಿತ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಇಂಜಿನಿಯರ್ ಆಶಿಶ್ ಕುಮಾರ್ ದಾಸ್ ಅವರ ಸಂಬಂಧಿತ ಸ್ಥಳಗಳಲ್ಲಿ ಭಾರೀ ಪ್ರಮಾಣ ಹಣ ಆಭರಣ ಪತ್ತೆ ಮಾಡಿರುವುದು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ನಾಲ್ಕು ದಿನಗಳಿಂದ ವಿಜಿಲೆನ್ಸ್ ತಂಡ ಆಶಿಶ್ ಕುಮಾರ್ ದಾಸ್ ಅವರ ಕಪ್ಪುಹಣ ಮತ್ತು ಅದರಿಂದ ಸಂಗ್ರಹವಾಗಿರುವ ಅಪಾರ ಸಂಪತ್ತಿನ ಪತ್ತೆ ಕಾರ್ಯದಲ್ಲಿ ತೊಡಗಿದೆ. ಒಡಿಶಾ ವಿಜಿಲೆನ್ಸ್ ನೀಡಿದ ಮಾಹಿತಿ ಪ್ರಕಾರ, 'ಒಡಿಶಾ ವಿಜಿಲೆನ್ಸ್ ಗ್ರಾಮಾಂತರ ಕಾಮಗಾರಿಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಆಶಿಶ್ ಕುಮಾರ್ ದಾಸ್ ಅವರ ಮನೆ ಹಾಗೂ ಕಚೇರಿ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಶಾಂತಿವನ, ಬೆಳಗಾಚಿಯಾ, ತ್ರಿಶೂಲಿಯಾ ಮತ್ತು ಕಟಕ್‌ನಿಂದ ಒಟ್ಟು 1.36 ಕೋಟಿ ರೂ. ಹಣ ಪತ್ತೆ ಮಾಡಲಾಗಿದೆ. ಇದರಲ್ಲಿ (ಒಡಿಶಾ ವಿಜಿಲೆನ್ಸ್ ಇತಿಹಾಸದಲ್ಲಿ ಅತ್ಯಧಿಕ) 1.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 25 ರಿಂದ ದಾಳಿ
ಮಾರ್ಚ್ 25 ರಂದು ಒಡಿಶಾ ವಿಜಿಲೆನ್ಸ್‌ಗೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಶಿಶ್ ಕುಮಾರ್ ದಾಸ್ ಲಕ್ಷಗಟ್ಟಲೆ ಹಣದೊಂದಿಗೆ ಎಲ್ಲೋ ಹೊರಟು ಹೋಗುತ್ತಿರುವ ಮಾಹಿತಿ ಸಿಕ್ಕಿತ್ತು. ಜಾಗೃತ ಇಲಾಖೆ ಅಧಿಕಾರಿಗಳು ಅವರನ್ನು ತಡೆದು ತಪಾಸಣೆ ನಡೆಸಿದಾಗ 10.23 ಲಕ್ಷ ರೂ.ಗೂ ಹೆಚ್ಚು ನಗದು ಪತ್ತೆಯಾಗಿದೆ. ಇದರ ನಂತರವೇ ವಿಜಿಲೆನ್ಸ್ ಅವರ ವಿರುದ್ಧದ ದಾಳಿಯ ವ್ಯಾಪ್ತಿಯನ್ನು ಹೆಚ್ಚಿಸಿತು. ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ತಮ್ಮ ತಂಡಗಳನ್ನು ಕಳುಹಿಸಿ ತನಿಖೆ ಪ್ರಾರಂಭಿಸಿತು. ಇದುವರೆಗೆ ಇಂಜಿನಿಯರ್ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಲಾಗಿದೆ. ಇದುವರೆಗಿನ ತನಿಖೆಯಲ್ಲಿ ದಾಸ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ 12 ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ.

ಇಂಜಿನಿಯರ್ ದಾಸ್ ದರೋಡೆಯಲ್ಲಿ ಭಾಗಿಯಾಗಿದ್ದಾರಾ?
ಇದುವರೆಗಿನ ತನಿಖೆಯಲ್ಲಿ ಕಟಕ್‌ನಲ್ಲಿ ಮನೆ, ಬರಿಪಾಲ್‌ನಲ್ಲಿ ಜಮೀನು ಕೂಡ ಪತ್ತೆಯಾಗಿದೆ. ಮಲ್ಕಂಗಿರಿ ವಿಜಿಲೆನ್ಸ್ ಘಟಕದ ಉಪ ಅಧೀಕ್ಷಕ ಶುಶಾಂತ್ ಕುಮಾರ್ ಬಿಸ್ವಾಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇಂಜಿನಿಯರ್ ಅವರು ಮಾರ್ಚ್‌ನಲ್ಲಿ ತಮ್ಮ ಬಿಲ್‌ಗಳನ್ನು ಪಾಸ್ ಮಾಡಲು ಗುತ್ತಿಗೆದಾರರಿಂದ ಭಾರಿ ಮೊತ್ತವನ್ನು ಕಮಿಷನ್ ಆಗಿ ತೆಗೆದುಕೊಂಡಿದ್ದಾರೆ ಮತ್ತು ಅದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ನೋಡುತ್ತಿದ್ದಾರೆ. ಜೊತೆಗೆ ಅದನ್ನು ಎಲ್ಲೋ ಹೊರಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ದಾಸ್ ಚಲನವಲನದ ಬಗ್ಗೆ ಈಗಾಗಲೇ ಶಂಕೆ ವ್ಯಕ್ತವಾಗಿದ್ದು, ಆತನ ಮೇಲೆ ನಿಗಾ ಇಡಲಾಗಿದೆ ಎಂದಿದ್ದಾರೆ.












Click it and Unblock the Notifications