Cyclone Effect on Friday: ಶುಕ್ರವಾರ ಚಂಡಮಾರುತ ಸೃಷ್ಟಿ ಖಚಿತ, ಓಡಿಶಾ ಸೇರಿ ಈ ಭಾಗದಲ್ಲಿ ಭಾರೀ ಮಳೆ: IMD
ಭುವನೇಶ್ವರ: ನವೆಂಬರ್ 16: ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿದ್ದ ಕಡಿಮೆ ಒತ್ತಡದ ಪ್ರದೇಶ ಕೊನೆಗೂ ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿದೆ. ಇದು ನಾಳೆ ಶುಕ್ರವಾರ ನವೆಂಬರ್ 17ರಂದು ಚಂಡಮಾರುತವಾಗಿ ಬದಲಾಗಲಿದೆ. ಅಲ್ಲದೇ ಬಾಂಗ್ಲಾದೇಶದ ಕರಾವಳಿ ಕಡೆಗೆ ಈ ಚಂಡಮಾರುತ ಸಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವೈಪರಿತ್ಯವು ಗುರುವಾರ ಮತ್ತಷ್ಟು ತೀವ್ರಗೊಂಡಿದೆ. ಇದು ಬಂಗಾಳಕೊಲ್ಲಿಯಿಂದ ಉತ್ತರ-ಈಶಾನ್ಯ ಭಾಗದತ್ತ ಗಂಟೆಗೆ 17 ಕಿಮೀ ವೇಗದಲ್ಲಿ ಚಲಿಸುತ್ತಿದೆ. ನಾಳೆ ಶುಕ್ರವಾರಕ್ಕೆ ಇದು ಚಂಡಮಾರುತವಾಗಿ ಬದಲಾಗುವ ನಿರೀಕ್ಷೆ ಇದೆ.

ಗುರುವಾರ ಬೆಳಗ್ಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪೂರ್ವ-ಆಗ್ನೇಯಕ್ಕೆ 390 ಕಿಮೀ ಮತ್ತು ಒಡಿಶಾದ ಪಾರಾದೀಪ್‌ನಿಂದ 320 ಕಿಮೀ ದೂರದಲ್ಲಿ ದಕ್ಷಿಣ-ಆಗ್ನೇಯದಲ್ಲಿ ಈ ವೈಪರಿತ್ಯ ಕೇಂದ್ರೀಕೃತವಾಗಿದೆ. ಬದಲಾದ ಹವಾಮಾನಗಳಿಂದ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಆಂಧ್ರ ಪ್ರದೇಶ, ಒಡಿಶಾ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆಗಳು ಇವೆ.
ಬಾಂಗ್ಲಾದೇಶಕ್ಕೆ ಅಪ್ಪಳಿಸುವ ಸಾಧ್ಯತೆ
ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಬದಲಾಗಲಿರುವ ಈ ವಾಯುಭಾರ ಕುಸಿತವು ಉತ್ತರ-ಈಶಾನ್ಯಕ್ಕೆ ಚಲಿಸಲಿದೆ. ಇನ್ನೂ ಶನಿವಾರ ಬೆಳಗ್ಗೆ ಮೊಂಗ್ಲಾ ಮತ್ತು ಖೆಪುಪಾರಾ ನಡುವೆ ಹಾದು ಬಾಂಗ್ಲಾದೇಶದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ. ಈ ವೇಳೆ ಇದರ ಗಾಳಿಯ ವೇಗ ಗಂಟೆಗೆ 55-65 ಕಿ.ಮೀ. ಕೆಲವೊಮ್ಮೆ ಗಂಟೆಗೆ 75 ಕಿಮೀ.ವರೆಗೆ ಹೆಚ್ಚಾಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಗಾಳಿಯ ತೀವ್ರತೆ ಪರಿಣಾಮವಾಗಿ ಒಡಿಶಾ ರಾಜ್ಯದ ಅನೇಕ ಭಾಗಗಳು, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದೆ. ಗಂಟೆಗೆ 40 ಕಿಮೀ ಮತ್ತು 70 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಬಹುತೇಕ ಕಡೆಗಳಲ್ಲಿ ಮಳೆಯಾರ್ಭಟ ಜೋರಿರಲಿದೆ.
ಭುವನೇಶ್ವರ ಹವಾಮಾನ ತಜ್ಞ, ವಿಜ್ಞಾನಿ ಉಮಾಶಂಕರ್ ದಾಸ್ ಅವರು, ಬುಧವಾರ ಕಂಡು ಬಂದಿದ್ದ ಕಡಿಮೆ ಒತ್ತಡ ಗಾಳಿಯು ಬಹುತೇಕ ಉತ್ತರ-ವಾಯುವ್ಯಕ್ಕೆ ಚಲಿಸುತ್ತಿತ್ತು. ಆಗ ಅದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿತ್ತು.
ಈ ಭಾಗದಲ್ಲಿ ಹಗುರ-ಭಾರಿ ಮಳೆ ಸಂಭವ
ಇಂದು ಅದರ ಸ್ಪಷ್ಟ ಚಿತ್ರಣ ಲಭ್ಯವಾಗಿತ್ತು. ಇಂದು ಗುರುವಾರ ಮಧ್ಯರಾತ್ರಿಯಿಂದ ಗುಡುಗು ಸಹಿತ ಹಿಂಗಾರು ಮಳೆ ಕರಾವಳಿ ಭಾಗದಲ್ಲಿ ಸಕ್ರಿಯವಾಗಲಿದೆ. ಮಲ್ಕಾನ್‌ಗಿರಿ, ಕೊರಾಪುಟ್ ಮತ್ತು ರಾಯಗಡ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆ ಬೀಳಲಿದೆ.
ಹವಾಮಾನದಲ್ಲಿನ ಬದಲಾವಣೆಗಳ ಕಾರಣದಿಂದ ಆಂಧ್ರ, ಒಡಿಶಾ ಕರಾವಳಿಯಲ್ಲಿ ನವೆಂಬರ್ 18 ರ ತನಕ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು ಕರಾವಳಿಯಲ್ಲಿ ಇದರ ಪ್ರಭಾವ ಭೀರುವ ಸಂಬವವಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ವಾಯುಭಾರತ ಕುಸಿತವು ಬಾಂಗ್ಲಾದೇಶದ ಕರಾವಳಿಯ ಕಡೆಗೆ ಉತ್ತರ-ಈಶಾನ್ಯಕ್ಕೆ ಚಲಿಸುವ ಲಕ್ಷಣಗಳು ಕಂಡು ಬಂದಿದ್ದು, ಭೂಮಿಗೆ ಅಪ್ಪಳಿಸಿದ ಬಳಿಕ ಅದರ ವೇಗ, ಪ್ರಭಾವ ಕಡಿಮೆ ಆಗಲಿದೆ. ಈ ವೇಳೆ ಇದು ಗರಿಷ್ಠ ತೀವ್ರತೆ ಹೊಂದಿರಲಿದೆ ಎಂದು ವರದಿ ಆಗಿದೆ.












Click it and Unblock the Notifications