ಪಟೇಲ್ ಪ್ರತಿಮೆಗೆ ಉಕ್ಕು ಕೇಳ್ತಾರೆ ನಾಳೆ ಪತ್ನಿಯನ್ನು ಕೇಳಿದ್ರೆ!
ಬೊರಕೋ, ಜ 1: ಜಾರ್ಖಂಡ್ ಸರಕಾರದ ಜವಾಬ್ದಾರಿಯುತ ಸಚಿವರೊಬ್ಬರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಉಕ್ಕು ಕೇಳುವವರು ನಾಳೆ ಪತ್ನಿಯನ್ನು ಕೇಳಬಹುದು ಎಂದು ಸಚಿವರು ಲೇವಡಿ ಮಾಡಿದ್ದಾರೆ.
ಜಾರ್ಖಂಡ್ ಸರಕಾರದ ಸಚಿವ ಮನ್ನಾನ್ ಮಲಕಾ ಮಂಗಳವಾರ (ಡಿ 31) ಬೊರಕೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗಾಗಿ ಉಕ್ಕನ್ನು ಕೇಳುತ್ತಿರುವ ಮೋದಿ, ಮುಂದೆ ಒಂದು ದಿನ ಜನತೆಯಿಂದ ಪತ್ನಿಯನ್ನು ಬಯಸುವಾಗ ಚಿನ್ನವನ್ನೂ ಕೇಳಲೂ ಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೊದಲೇ ನರೇಂದ್ರ ಮೋದಿ ಹೇಳಿ ಕೇಳಿ ಮಹಾಭಾರತದ ವಿಧುರ ಪಾತ್ರಧಾರಿ, ಜನತೆಯಿಂದ ಪತ್ನಿಯ ಜೊತೆ ಚಿನ್ನವನ್ನು ಕೇಳುವ ದಿನವೂ ಬರಬಹುದು. ಜನತೆ ಎಚ್ಚರಿಕೆಯಿಂದ ಮತ್ತು ಅವರ ಮಾತಿಗೆ ಬೆಲೆ ಕೊಡದೇ ಇರುವುದು ಸೂಕ್ತ ಎಂದು ಸಚಿವ ಮಲಕಾ, ಮೋದಿಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ಬಿಜೆಪಿಯವರು ಈ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಜನತೆಯಿಂದ ಇಟ್ಟಿಗೆ ದೇಣಿಗೆ ನೀಡುವಂತೆ ಕೋರಿದರು. ಇಟ್ಟಿಗೆಯ ಗತಿ ಏನಾಯಿತು ಎಂದು ದೇಶದ ಜನತೆಗೆ ಗೊತ್ತು.
ಈಗ ನರೇಂದ್ರ ಮೋದಿ ಪಟೇಲ್ ಪ್ರತಿಮೆಗಾಗಿ ಉಕ್ಕು ಕೇಳುವ ಬೃಹನ್ನಾಟಕವನ್ನು ಆಡುತ್ತಿದ್ದಾರೆ. ಲೋಕಸಭಾ ಚುನಾವಣಾ ಕಾಲೇ ಪಟೇಲ್ ಅವರ ಮೇಲೆ ಬಿಜೆಪಿಗೆ ಮತ್ತು ಮೋದಿಗೆ ಅಪಾರ ಗೌರವ ಹುಟ್ಟಿ ಕೊಂಡಿದೆ ಎಂದು ಮಲಕಾ ಟೀಕೆ ಮಾಡಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ: ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿರುವ ಬಿಜೆಪಿ, ಸಚಿವ ಮಲಕಾ ಒಬ್ಬ ಮಾನಸಿಕ ಅಸ್ವಸ್ಥ. ಇಂಥಹ ಸಚಿವರಿಂದ ಜಾರ್ಖಂಡ್ ಜನತೆ ಏನೂ ಅಪೇಕ್ಷಿಸಿರಲಾರರು. ಈ ಸಚಿವರನ್ನು ಈ ಕೂಡಲೇ ವಜಾ ಗೊಳಿಸಬೇಕೆಂದು ಜಾರ್ಖಂಡ್ ರಾಜ್ಯ ಬಿಜೆಪಿ ಘಟಕ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒತ್ತಾಯಿಸಿದೆ.












Click it and Unblock the Notifications