ಪತ್ನಿಗೆ ಕಿರುಕುಳ ನೀಡುವ ಎನ್ಆರ್ ಐಗಳ ಪಾಸ್ ಪೋರ್ಟ್ ರದ್ದು?
ಭಾರತೀಯ ಮೂಲದ ಪತ್ನಿ ಪೀಡಕ ಎನ್ಆರ್ ಐಗಳ ಪಾಸ್ ಪೋರ್ಟ್ ರದ್ದತಿಗೆ ಸಮಿತಿ ಆಗ್ರಹ. ಎನ್ಆರ್ ಐಗಳ ಮದುವೆ ವಿಚಾರವಾಗಿ ಶಿಫಾರಸು ಮಾಡಲು ರಚಿಸಲಾಗಿರುವ ಸಮಿತಿ.
ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಯುವತಿಯನ್ನು ಮದುವೆಯಾಗುವ ಅನಿವಾಸಿ ಭಾರತೀಯರು, ಮದುವೆಯಾದ ನಂತರ ತಮ್ಮ ಪತ್ನಿಗೆ ಕಿರುಕುಳ ನೀಡಿದರೆ ಅಥವಾ ತ್ಯಜಿಸಿದರೆ ಅಂಥವರ ಪಾಸ್ ಪೋರ್ಟ್ ರದ್ದು ಮಾಡುವ ಮಹತ್ವದ ಶಿಫಾರಸೊಂದನ್ನು ಕೇಂದ್ರ ಸರ್ಕಾರದ ಅಂತರ ಸಚಿವಾಲಯಗಳ ಸಮಿತಿಯೊಂದು ವಿದೇಶಾಂಗ ಇಲಾಖೆಗೆ ಸಲ್ಲಿಸಿದೆ.
ಭಾರತದಲ್ಲಿರುವ ಯುವತಿಯನ್ನು ಮದುವೆಯಾಗಿ ತಾವಿರುವ ದೇಶಕ್ಕೆ ಕರೆದುಕೊಂಡು ಹೋಗುವ ಅನಿವಾಸಿ ಭಾರತೀಯರು, ಅಲ್ಲಿ ಆ ಯುವತಿಯರಿಗೆ ಕಿರುಕುಳ ಕೊಡುವಂಥ ಪ್ರಕರಣಗಳು ನಡೆದಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಿತಿಯು ಆಗ್ರಹಿಸಿದೆ.

ತಮ್ಮ ವಿರುದ್ಧ ಗೃಹದೌರ್ಜನ್ಯ ನಡೆಯುತ್ತಿರುವ ಬಗ್ಗೆ ಎನ್ಆರ್ ಐ ಪತ್ನಿಯರು ಕೇಂದ್ರ ವಿದೇಶಾಂಗ ಇಲಾಖೆಯ ಗಮನಕ್ಕೆ ಬಂದರೆ, ಅಂಥ ಪ್ರಕರಣಗಳಲ್ಲಿ ಪ್ರಕರಣಗಳು ನಡೆದಿರುವ ದೇಶಗಳೊಂದಿಗೆ ಭಾರತ ಹೊಂದಿರುವ ರಾಜತಾಂತ್ರಿಕ ಸಂಬಂಧದ ನೆರವನ್ನು ಪಡೆದು ಇಂಥ ಪ್ರಕರಣಗಳನ್ನು ಸೂಕ್ತವಾಗಿ ನಿಭಾಯಿಸಬೇಕೆಂದೂ ಸಮಿತಿಯು ಶಿಫಾರಸು ಮಾಡಿದೆ.
ಕಳೆದ ಮೇ ತಿಂಗಳಲ್ಲೇ, ಇಂಥದ್ದೊಂದು ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಎನ್ಆರ್ ಐಗಳ ಮದುವೆಗಳು ಹಾಗೂ ವಿವಾಹದ ನಂತರ ಉದ್ಭವವಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲವಾರು ಶಿಫಾರಸುಗಳನ್ನು ಮಾಡಬೇಕೆಂದು ಸಮಿತಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಸಮಿತಿಯು ಕೆಲ ಶಿಫಾರಸುಗಳನ್ನು ಈಗಾಗಲೇ ಕೇಂದ್ರ ವಿದೇಶಾಂಗ ಇಲಾಖೆಗೆ ಕೊಟ್ಟಿದೆ.
ಅದರಂತೆ, ಎನ್ಆರ್ ಐಗಳು ಭಾರತದಲ್ಲಿ ಆಗುವ ವಿವಾಹಗಳಿಗೆ ಆಧಾರ್ ಕಡ್ಡಾಯಗೊಳಿಸುವ ಶಿಫಾಸರನ್ನು ಸರ್ಕಾರದ ಮುಂದಿಟ್ಟಿರುವ ಸಮಿತಿಯು ಈಗ ಎನ್ ಆರ್ ಐಗಳಿಂದ ಅವರ ಭಾರತೀಯ ಪತ್ನಿಯರಿಗೆ ಆಗುವ ಅನ್ಯಾಯಗಳನ್ನು ಸರಿಪಡಿಸಬೇಕೆಂದು ಅದು ಕೋರಿದೆ.












Click it and Unblock the Notifications