ಮೇ ತಿಂಗಳಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ತಾಪಮಾನ ಹೆಚ್ಚಳ!
ನವದೆಹಲಿ, ಮೇ 1 : ಏಪ್ರಿಲ್‌ನಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಗರಿಷ್ಟ ತಾಪಮಾನ ಪ್ರಮಾಣ ಹೆಚ್ಚಾಗಿದ್ದು, 122 ವರ್ಷಗಳ ದಾಖಲೆಯನ್ನ ಮುರಿದಿತ್ತು. ಈಗ ಮೇ ತಿಂಗಳಲ್ಲೂ ಸಹ ವಾಯುವ್ಯ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಮಟ್ಟ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ. ಉಳಿದಂತೆ ದಕ್ಷಿಣ ಭಾರತದ ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.
ಈ ವರ್ಷದಲ್ಲಿ ಮಾರ್ಚ್ ನಿಂದಲೇ ಆರಂಭವಾದ ಬಿಸಿಲಿನ ತಾಪಮಾನ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಏಪ್ರಿಲ್ 28 ರಂದು ದಾಖಲಾದ ತಾಪಮಾನ ಕಳೆದ 122 ವರ್ಷಗಳಲ್ಲೇ ಅತ್ಯಧಿಕ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂಕಿ ಅಂಶ ತಿಳಿಸಿದೆ.
ಭಾರತದ ಉತ್ತರದ ರಾಜ್ಯಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ನಿರಂತವಾಗಿ ತಾಪಮಾನ ಪ್ರಮಾಣ ಏರಿಕೆಯಾಗುತ್ತಿದ್ದು, 35.90 ಡಿಗ್ರಿ ಸೆಲ್ಸಿಯಸ್ ನಿಂದ 37.78 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಈ ಮೂಲಕ ಉತ್ತರದ ರಾಜ್ಯಗಳಲ್ಲಿ ಸಾಮಾನ್ಯ ಬಿಸಿಲಿನ ತಾಪಮಾನಕ್ಕಿಂತ ಈ ಬಾರಿ ಹೆಚ್ಚು ಬಿಸಿಗಾಳಿ ಪ್ರಮಾಣ ಹೆಚ್ಚಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಹಲವು ಕಡೆ ತುಂತುರು ಮಳೆಯಾಗುತ್ತಿದೆ.

ವಾಯುವ್ಯ ಮತ್ತು ಮಧ್ಯ ಭಾರತದಲ್ಲೂ ಬಿಸಿಲ ಬೇಗೆ:
ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಪಂಜಾಬ್ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿರುವ ರಾಜ್ಯಗಳು ಸುಡುವ ಬಿಸಿಲಿನಿಂದ ತತ್ತರಿಸುತ್ತಿದ್ದರೆ, ಇತ್ತ ಈಶಾನ್ಯ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಸದ್ಯಕ್ಕೆ ಮೇ ತಿಂಗಳಿನಲ್ಲೂ ಸಹ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ತಾಪಮಾನ ಇರಲಿದ್ದು, ಈಶಾನ್ಯ ಭಾರತದ ಉತ್ತರ ಭಾಗಗಗಲ್ಲೂ ಕೂಡ ಗರಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಉಳಿದಂತೆ ದಕ್ಷಿಣ ಭಾರತದ ಭಾಗಗಳಲ್ಲಿ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಮಾನಶಾಸ್ತ್ರಜ್ಞ ಮೃತ್ಯುಂಜಯ್ ಮಹಾಪಾತ್ರ ತಿಳಿಸಿದ್ದಾರೆ.

"ಮೇ ತಿಂಗಳಲ್ಲಿ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ತಾಪಮಾನ ಮಟ್ಟ ಹಾಗೂ ಬಿಸಿಗಾಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಭಾಗದಲ್ಲಿ ಬಿಸಿಲಿನ ತಾಪಮಾನಕ್ಕಿಂತ ಮಳೆ ಹೆಚ್ಚಾಗಿ ಆಗುವ ಸಾಧ್ಯತೆಗಳಿರುತ್ತದೆ. ಉತ್ತರ ಭಾರತದ ರಾಜ್ಯಗಳನ್ನ ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ," ಎಂದು ಮಹಾಪಾತ್ರ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಮೇ ತಿಂಗಳಿನಲ್ಲಿ ಮಳೆ ಹಾಗೂ ಬಿಸಿಲಿನ ತಾಪಮಾನ ಎರಡು ಇರಲಿದ್ದು, ಉತ್ತರದ ಭಾಗಗಳಲ್ಲಿ ತಾಪಮಾನ ಮಟ್ಟ ಹೆಚ್ಚಾದರೆ, ಈಶಾನ್ಯ ಹಾಗೂ ದಕ್ಷಿಣದ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಮಿಶ್ರ ವಾತವರಣವಿರುವ ಸಾಧ್ಯತೆ ಇದೆ. ಈಗಾಗಲೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬೇಸಿಗೆಯ ಮಳೆಯಾಗುತ್ತಿದೆ. ಆದರೆ ಉತ್ತರ ಭಾರತದಲ್ಲಿ ಮಾತ್ರ ಸುಡು ಬಿಸಿಲಿನ ಪ್ರಮಾಣ ಮಾತ್ರ ಹೆಚ್ಚಾಗುತ್ತಿದೆ. ಮೇ ತಿಂಗಳೂ ಪೂರ್ತಿ ಹೀಗೆ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications