Ganja Home Delivery: ಆಪ್ ಮೂಲಕ ಗಾಂಜಾ ಹೋಂ ಡೆಲಿವರಿ, ಖತರ್ನಾಕ್ ಗ್ಯಾಂಗ್ ಸಿಕ್ಕಿಬಿದ್ದಿದ್ದೇಗೆ?
ಮಾದಕ ವಸ್ತು ಗಾಂಜಾ ಆರೋಗ್ಯಕ್ಕೆ ಹಾನಿಕಾರಕ. ಅಲ್ಲದೆ ಇದನ್ನು ಸೇವಿಸುವುದು ಕಾನೂನುಬಾಹಿರ ಕೂಡ. ಆದರೆ ಈಗಿನ ಯುವಜನರು ಅಕ್ರಮವಾಗಿ ಗಾಂಜಾ ತರಿಸಿಕೊಂಡು ಎಂಜಾಯ್ ಮಾಡುತ್ತಾರೆ. ಇದರ ಹಿಂದೆ ದೊಡ್ಡ ದಂಧೆಯೇ ಇದ್ದು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಭೂಪರೂ ಇದ್ದಾರೆ. ಆದರೆ, ಯಾರಿಗೂ ಅನುಮಾನ ಬಾರದಂತೆ ಆನ್‌ಲೈನ್ ಮೂಲಕವೇ ಬಾಗಿಲಿಗೆ ಗಾಂಜಾ ಡೆಲಿವರಿ ನೀಡುತ್ತಿದ್ದ ಜಾಲವನ್ನು ಪೊಲೀಸರು ಹತ್ತಿಕ್ಕಿದ್ದಾರೆ. ಇದಕ್ಕಾಗಿ ಒಂದು ಆಪ್ ಬಳಕೆ ಮಾಡುತ್ತಿರುವುದನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಕೆಲ ಪೆಡ್ಲರ್‌ಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬೀಳುವ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಈಗೆಲ್ಲ ಹೋಂ ಡೆಲಿವರಿ ಜಮಾನ ಆಗಿರುವ ಕಾರಣ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಗಾಂಜಾ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಸಿಂಪಲ್ಲಾಗಿ ಫೋನಿನ ಮೂಲಕವೇ ಗಾಂಜಾ ನೇರವಾಗಿ ಮನೆಬಾಗಿಲಿಗೆ ತಲುಪಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಗ್ರಾಹಕರನ್ನು ಪತ್ತೆ ಮಾಡಿ, ನಂತರ ಯುಪಿಐ ಅಪ್ಲಿಕೇಶನ್ ಮೂಲಕ ಹಣ ಪಾವತಿ ಮಾಡಿಕೊಳ್ಳುತ್ತಿದ್ದರು. ನಂತರ ಕೊರಿಯರ್ ಅಪ್ಲಿಕೇಶನ್ ಬಳಸಿ ಅವರ ಮನೆಗೆ ಗಾಂಜಾ ತಲುಪಿಸುತ್ತಿದ್ದ ಗ್ಯಾಂಗ್ ಅನ್ನು ನೋಯ್ಡಾ ಪೊಲೀಸರು ಲಾಕ್ ಮಾಡಿದ್ದಾರೆ.
ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪ್ಯಾಕಿಂಗ್ ವ್ಯವಸ್ಥೆಯಲ್ಲಿ ಗಾಂಜಾವನ್ನು ಅಚ್ಚುಕಟ್ಟಾಗಿ ತಲುಪಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಅಕ್ರಮ ಗಾಂಜಾ ಮಾರಾಟಕ್ಕೆ ಈ ಗ್ಯಾಂಗ್ ನಕಲಿ ಬಿಲ್‌ಗಳನ್ನು ತಯಾರಿಸಿದೆ. ಆದರೆ ಡೆಲಿವರಿ ಮಾಡುವ ವ್ಯಕ್ತಿಗೆ ಅದರಲ್ಲಿರುವುದು ಗಾಂಜಾ ಎನ್ನುವುದು ತಿಳಿಯುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
ಯಾರೆಲ್ಲ ಗ್ರಾಹಕರು?
ಈ ಗ್ಯಾಂಗ್ ಸದಸ್ಯರು ಕಾಲೇಜುಗಳು ಮತ್ತು ಕಾರ್ಪೊರೇಟ್ ಕಚೇರಿಗಳ ಬಳಿ ತೆರಳಿ ಗಾಂಜಾ ಖರೀದಿದಾರರನ್ನು ಸಂಪರ್ಕಿಸುತ್ತಿದ್ದರು. ಆಸಕ್ತರಿಗೆ ತಮ್ಮ ಫೋನ್ ನಂಬರ್ ನೀಡುತ್ತಿದ್ದರು. ನಂತರ ಸಂಪೂರ್ಣವಾಗಿ ಆನ್‌ಲೈನ್ ಪೇಮೆಂಟ್ ಮೂಲಕ ಹಣ ಪಡೆಯುತ್ತಿದ್ದರು. ಗ್ರಾಹಕರು ಡೆಲಿವರಿ ಅಪ್ಲಿಕೇಶನ್‌ಗಳನ್ನ ಬಳಸಿ ತಮ್ಮ ಆರ್ಡರ್ ಮಾಡುತ್ತಿದ್ದರು. ಇ-ಕಾಮರ್ಸ್ ಕಂಪನಿಗಳ ನಕಲಿ ವಸ್ತುಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಒಂದು ಕೊರಿಯರ್ ಅನ್ನು ಎಂದಾದರೂ ತಡೆದರೆ, ಡೆಲಿವರಿ ಮಾಡುವ ವ್ಯಕ್ತಿಯೇ ಇದರಲ್ಲಿ ಆರೋಪಿಯಾಗಿ ಸಿಕ್ಕಿಬೀಳುತ್ತಾನೆ ಎಂಬುದು ಅವರ ಪ್ಲ್ಯಾನ್ ಆಗಿತ್ತು ಎನ್ನಲಾಗಿದೆ. ಈ ಜಾಲವನ್ನು ಬೆನ್ನತ್ತಿದಾಗ ಮಾಸ್ಟರ್ ಮೈಂಡ್ ಹಾಗೂ ಇಬ್ಬರನ್ನು ಬಂಧಿಸಿ 10 ಕೆ.ಜಿಯಷ್ಟು ಗಾಂಜಾ ಮತ್ತು ಪ್ಯಾಕಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು ₹30 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications