ಯುದ್ಧವಿಲ್ಲ, ಸೈನಿಕರು ಹುತಾತ್ಮರಾಗುತ್ತಿರುವುದೇಕೆ: ಭಾಗವತ್ ಪ್ರಶ್ನೆ
ದೇಶದಲ್ಲಿ ಈಗ ಯುದ್ಧವಿಲ್ಲ. ಆದರೂ ಗಡಿಯಲ್ಲಿ ಸೈನಿಕರು ಹುತಾತ್ಮರಾಗುತ್ತಿರುವುದೇಕೆ?" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಪ್ರಹಾರ ಸಮಾಜ ಜಾಗೃತಿ ಸಂಸ್ಥೆಯ ರಜತ ಮಹೋತ್ಸವದಲ್ಲಿ ಗುರುವಾರ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ್ಯಕ್ಕೂ ಮೊದಲು ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಅಗತ್ಯವಿತ್ತು. ಅದಕ್ಕೆಂದೇ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಈಗ ಅಂಥ ಅಗತ್ಯ ಇಲ್ಲ. ಆದರೂ ಸೈನಿಕರು ಹುತಾತ್ಮರಾಗುವುದು ಕಡಿಮೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
"ದೇಶದ ವಿಷಯಕ್ಕೆ ಬಂದಾಗ ಸರ್ಕಾರ ತನ್ನ ಕರ್ತವ್ಯ ಮಾಡುತ್ತದೆ, ಪೊಲೀಸರು, ಸೈನಿಕರು ತಮ್ಮ ಕೆಲಸ ಮಾಡುತ್ತಾರೆ. ಆದರೆ ಆಯಾ ವಿಭಾಗಗಳಷ್ಟೇ ದೇಶದ ಕೆಲಸ ಮಾಡಿದರೆ ಸಾಲದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೇಶದ ಬಗೆಗಿನ ತನ್ನ ಜವಾಬ್ದಾರಿಗಳು ಅರ್ಥವಾಗಬೇಕು. ಜನರು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಅದಕ್ಕೆಂದೇ ಇಂದಿಗೂ ಸೈನಿಕರು ಹುತಾತ್ಮರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ" ಎಂದರು.
"ದೇಶದಲ್ಲಿ ಜಾರಿಗೆ ತಂದ ಯೋಜನೆಗಳು ಪ್ರತಿಯೊಬ್ಬನ ಮೇಲೂ ಪರಿಣಾಮ ಬೀರುತ್ತದೆ. ನಾವ್ಯಾರೂ ನಿಯಮಗಳನ್ನು ಮಾಡಿಲ್ಲ, ಆದರೆ ಪರಿಣಾಮ ಎದುರಿಸುತ್ತಿದ್ದೇವೆ. ಹಣದುಬ್ಬರ ಹೆಚ್ಚಿದೆ, ಅದಕ್ಕೆ ನಾನಾಗಲೀ, ನೀವಾಗಲೀ ಕಾರಣವಲ್ಲ, ಆದರೆ ಪರಿಣಾಮ ಎದುರಿಸುತ್ತಿರುವವರು ನಾವು; ನಿರುದ್ಯೋಗ ಹೆಚ್ಚಾಗಿದೆ, ಅದಕ್ಕೂ ನಾನಾಗಲೀ, ನೀವಾಗಲೀ ಕಾರಣವಲ್ಲ, ಆದರೆ ಪರಣಾಮ ನಮ್ಮಮೇಲೆ! ಆದ್ದರಿಂದ ನಾವು ನಮಗಾಗಿ ಮಾತ್ರವಲ್ಲ, ದೇಶಕ್ಕಾಗಿ ಬದುಕುವುದಕ್ಕೆ ಆರಂಭಿಸಬೇಕು. ಆಗ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ" ಎಂದು ಭಾಗವತ್ ಹೇಳಿದರು.












Click it and Unblock the Notifications