ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ
ನವದೆಹಲಿ, ಮೇ 25: ಈ ಬಾರಿಯ ಚುನಾವಣೆಯಲ್ಲಿ ಇವಿಎಂ ಮತಗಳ ಎಣಿಕೆಯ ಜತೆಯಲ್ಲಿ ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಮತಗಳನ್ನು ಎಣಿಸಿ ತಾಳೆ ನೋಡಬೇಕು ಎಂಬ ವಿರೋಧಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್ ಹಾಗೂ ಚುನಾವಣಾ ಆಯೋಗಗಳು ತಿರಸ್ಕರಿಸಿದ್ದವು. ಮತದಾನದಲ್ಲಿ ಯಾವುದೇ ಲೋಪವಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಇವಿಎಂ ಜತೆಗೆ ವಿವಿಪ್ಯಾಟ್ ಚೀಟಿಗಳ ಎಣಿಕೆಯೂ ಮುಖ್ಯ ಎಂದು ಆಗ್ರಹಿಸಲಾಗಿತ್ತು.
ಕಳೆದ ಬಾರಿಯ ಚುನಾವಣೆಗಳಿಗಿಂತ ಅಧಿಕ ಪ್ರಮಾಣದಲ್ಲಿ ವಿವಿಪ್ಯಾಟ್ ಮತಗಳನ್ನು ತಾಳೆಹಾಕಿ ನೋಡಲಾಗಿತ್ತು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿನ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಮತಗಳನ್ನು ಲೆಕ್ಕಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.
ಪ್ರಸಕ್ತ ಚುನಾವಣೆಯಲ್ಲಿ 90 ಕೋಟಿ ಜನರು ಮತಚಲಾಯಿಸಿದ್ದಾರೆ. ಚುನಾವಣೆಗಾಗಿ ಚುನಾವಣಾ ಆಯೋಗ 22.3 ಲಕ್ಷ ಬ್ಯಾಲಟ್ ಘಟಕ, 16.3 ಲಕ್ಷ ನಿಯಂತ್ರಣ ಘಟಕ ಮತ್ತು 17.3 ಲಕ್ಷ ವಿವಿಪ್ಯಾಟ್‌ಗಳನ್ನು ಬಳಸಿತ್ತು.

ಈ 17.3 ಲಕ್ಷ ವಿವಿಪ್ಯಾಟ್‌ಗಳಲ್ಲಿ 20,625 ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ 4,125 ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 20,625 ವಿವಿಪ್ಯಾಟ್‌ಗಳಲ್ಲಿ ಒಂದೇ ಒಂದು ಕಡೆಯೂ ಮತಗಳ ತಾಳೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
2013-14ರಲ್ಲಿ ವಿವಿಪ್ಯಾಟ್ ಪರಿಚಯವಾದ ಸಂದರ್ಭದಿಂದಲೂ ಈ ಪ್ರಕ್ರಿಯೆಯಲ್ಲಿ ಒಮ್ಮೆಯೂ ಲೋಪ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಇವಿಎಂ ಮತ್ತು ವಿವಿಪ್ಯಾಟ್‌ಗಳ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ವಿರೋಧಪಕ್ಷಗಳು ಅದರ ವಿರುದ್ಧ ವ್ಯಾಪಕ ಪ್ರಚಾರ ನಡೆಸಿದ್ದವು. ಇವಿಎಂಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಶೇ 100ರಷ್ಟು ವಿವಿಪ್ಯಾಟ್‌ಗಳ ಎಣಿಕೆಯೂ ನಡೆಯಬೇಕು ಎಂದು ಆಗ್ರಹಿಸಿದ್ದವು.












Click it and Unblock the Notifications