ಬಿಜೆಪಿ ಜತೆ ಭಿನ್ನಾಭಿಪ್ರಾಯವಿಲ್ಲ: ಅಮಿತ್ ಶಾ ಭೇಟಿ ಬಳಿಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ
ಮುಂಬೈ, ಜೂನ್. 05: ಶಿವಸೇನೆ ಮತ್ತು ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ. ಈ ಬಗ್ಗೆ ವಿಪಕ್ಷಗಳ ವಿರುದ್ಧ ಕಿಡಿ ಕಾರಿರುವ ಅವರು, "ಯಾವುದೇ ಕೆಲಸವಿಲ್ಲದ" ಪ್ರತಿಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಎಂದಿದ್ದಾರೆ.
ಶಿವಸೇನೆ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಗರಿಕ ಚುನಾವಣೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ಎದುರಿಸಲಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ. " ಭವಿಷ್ಯದ ಎಲ್ಲಾ ಚುನಾವಣೆಗಳನ್ನು (ಲೋಕಸಭೆ, ವಿಧಾನಸಭೆ ಮತ್ತು ನಾಗರಿಕ ಸಂಸ್ಥೆಗಳು ಸೇರಿದಂತೆ) ಶಿವಸೇನೆ ಮತ್ತು ಬಿಜೆಪಿ ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ನಾವು ಜೊತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತ್ತು ಬಹುಮತದೊಂದಿಗೆ ಗೆಲ್ಲುತ್ತೇವೆ" ಎಂದು ಹೇಳಿದ್ದಾರೆ.

"ಸೀಟು ಹಂಚಿಕೆ ವಿಚಾರದಲ್ಲಿ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವಿರೋಧ ಪಕ್ಷಗಳಿಗೆ ಕೆಲಸವಿಲ್ಲ. ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಾವು ಈ ವಿಷಯಗಳಿಗೆ ಗಮನ ಕೊಡುವುದಿಲ್ಲ. ಚುನಾವಣೆ ದೂರವಿರುವ ಕಾರಣ ಈಗ ಸೀಟು ಹಂಚಿಕೆ ಬಗ್ಗೆ ಚರ್ಚೆ ಅಗತ್ಯವಿಲ್ಲ. ಚುನಾವಣೆ ಘೋಷಣೆಯಾದಾಗ ನಾವು ಚರ್ಚಿಸುತ್ತೇವೆ" ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಮುಂದುವರಿದು, "ಶೀಘ್ರದಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ. ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಅದು ನಡೆಯಲಿದೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮ್ಮದು ಅತ್ಯಂತ ಬಲಿಷ್ಠ ಮೈತ್ರಿ. ನಾವು ಕಳೆದ 10 ತಿಂಗಳಿನಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ.
"ನಾವು ಅಧಿಕಾರಕ್ಕೆ ಬರುವ ಮೊದಲು, ಹಲವಾರು ಯೋಜನೆಗಳು ಸ್ಥಗಿತಗೊಂಡಿದ್ದವು. ಎಲ್ಲೆಂದರಲ್ಲಿ ಸ್ಪೀಡ್ ಬ್ರೇಕರ್‌ಗಳಿದ್ದವು. ನಾವು ಆ ಬ್ರೇಕರ್‌ಗಳನ್ನು ತೆಗೆದುಹಾಕಿದ್ದೇವೆ. ಈಗ ಜನರಿಗೆ ಇದೆಲ್ಲಾ ತಿಳಿಯುತ್ತಿದೆ. ಮುಂಬೈ ಸೇರಿದಂತೆ ರಾಜ್ಯದಾದ್ಯಂತ ಹಲವು ಯೋಜನೆಗಳು ವೇಗದ ಹಾದಿಯಲ್ಲಿವೆ" ಎಂದು ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಮಿತ್ ಶಾ ಭೇಟಿಯ ಕುರಿತು ಮಾತನಾಡಿದ ಏಕನಾಥ್ ಶಿಂಧೆ, "ನಿನ್ನೆ ನಾನು ದೇವೇಂದ್ರ ಫಡ್ನವಿಸ್ ಜೊತೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ರೈತರು, ಕಾರ್ಮಿಕರು, ಮರಾಠವಾಡ ವಾಟರ್ ಗ್ರಿಡ್ ಮತ್ತು ಸಹಕಾರಿ ಕ್ಷೇತ್ರಗಳಿಗಾಗಿ ನಾವು ಹಲವಾರು ಯೋಜನೆಗಳನ್ನು ಚರ್ಚಿಸಿದ್ದೇವೆ. ಇದು ಸಕಾರಾತ್ಮಕ ಭೇಟಿಯಾಗಿತ್ತು. ಕೇಂದ್ರವು ಎಲ್ಲ ರೀತಿಯಲ್ಲೂ ನಮಗೆ ಬೆಂಬಲ ನೀಡುತ್ತಿದೆ" ಎಂದಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಹೆಚ್ಚು ಪ್ರಬಲವಾಗಿದೆ. ಇಬ್ಬರ ಸಿದ್ಧಾಂತವೂ ಅದೇ ಎಂದಿದ್ದಾರೆ. ಮುಂಬೈ ಮೆಟ್ರೋ, ಟ್ರಾನ್ಸ್ ಹಾರ್ಬರ್ ಲೈನ್ ಮತ್ತು ಇತರ ಯೋಜನೆಗಳು ಈಗ ವೇಗದ ಟ್ರ್ಯಾಕ್‌ನಲ್ಲಿವೆ. ಕಳೆದ ಬಜೆಟ್‌ನಲ್ಲಿ ನಾವು ರೈತರು, ಮಹಿಳಾ ಸಬಲೀಕರಣ ಮತ್ತು ಹಿರಿಯ ನಾಗರಿಕರ ಬಗ್ಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ ದಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ, ಏಕನಾಥ್ ಶಿಂಧೆ ಅವರು ಶಿವಸೇನೆಯ 39 ಶಾಸಕರೊಂದಿಗೆ ಬೃಹತ್ ಬಂಡಾಯ ಹೂಡಿ, ಮಹಾವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಸಾಕ್ಷಿಯಾಗಿದ್ದರು. ಈ ಬಂಡಾಯವು ಶಿವಸೇನೆಯನ್ನು ವಿಭಜಿಸಿತು, ಅದು ಈಗ ಎರಡು ಬಣಗಳಾಗಿ ವಿಭಜನೆಯಾಗಿದ್ದು, ಒಂದು ಏಕನಾಥ್ ಶಿಂಧೆ ನೇತೃತ್ವದಲ್ಲಿ ಮತ್ತು ಇನ್ನೊಂದು ಉದ್ಧವ್ ಠಾಕ್ರೆ ಬಣವಾಗಿದೆ. ಬಂಡಾಯದ ನಂತರ ಏಕನಾಥ್ ಶಿಂಧೆ ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು.












Click it and Unblock the Notifications