ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಇಲ್ಲ: ಯಾರಿಗೆಲ್ಲಾ ಟಿಕೆಟ್: ಡಿ.ಕೆ ಶಿವಕುಮಾರ್ ಹೇಳಿದ್ದೇನು?
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ನಾಯಕರಿಗೆ ಒತ್ತಡ ಹಾಕುವ ಮೂಲಕ ಟಿಕೆಟ್ ಪಡೆಯಲು ಲಾಭಿ ನಡೆಸಿದ್ದಾರೆ.
ದೆಹಲಿ,ಮಾರ್ಚ್17: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ದತೆಯನ್ನ ನಡೆಸಿದ್ದು, ಇತ್ತ ಕಾಂಗ್ರೆಸ್ ಅಭ್ಯರ್ಥಿಗಳ ವಿಚಾರವೇ ದೊಡ್ಡ ಕಗ್ಗಂಟಾಗಿ ಪರಿಗಣಿಸಿದೆ.
ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಘೋಷಿಸಿದ್ದರೂ, ಗೆಲುವು ಕಷ್ಟವಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ವರದಿ ಬಂದ ಕ್ಷೇತ್ರಗಳ ಶಾಸಕರಿಗೆ ಮತ್ತೆ ಟಿಕೆಟ್ ಸಿಗುವುದು ಕಷ್ಟ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆದಿದೆ.

ಇತ್ತ ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ‍್ಧರಾಮಯ್ಯ ಈಗಾಗಲೇ ಸಾಕಷ್ಟು ಬಾರೀ ಸಭೆ ನಡೆಸಿದರು, ಇನ್ನೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.
ಇನ್ನೂ ಟಿಕೆಟ್ ಗಾಗಿ ಜಾತಿವಾರು ಸ್ಥಾನಗಳನ್ನ ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದು, ಕೆಲ ನಾಯಕರು ಹೈಕಮಾಂಡ್ ನಾಯಕರಿಗೆ ಒತ್ತಡ ಹಾಕುವ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಭಿ ನಡೆಸಿದ್ದಾರೆ. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ‍್ಧರಾಮಯ್ಯ ಸೇರಿ ಹಲವು ನಾಯಕರು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದು ಆಕಾಂಕ್ಷಿಗಳ ದಂಡು ದೆಹಲಿಯತ್ತ ತೆರಳಿದೆ.

ಈ ಕುರಿತು ದೆಹಲಿಯಲ್ಲಿ ಶುಕ್ರವಾರ ಮಾತನಾಡಿರುವ ಡಿ.ಕೆ ಶಿವಕುಮಾರ್, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಒತ್ತಡ ಇಲ್ಲ. ಯಾರೆಲ್ಲಾ ಅಭ್ಯರ್ಥಿಗಳು ಶ್ರಮ ವಹಿಸಿದ್ದಾರೆ ಅನ್ನೋದು ಗೊತ್ತಿದೆ. ಕಳೆದ 3 ವರ್ಷದಿಂದ ಅಭ್ಯರ್ಥಿಗಳ ಶ್ರಮದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದೇವೆ. ಸಿಇಸಿ ಜತೆ ಐದಾರು ಬಾರಿ ಸಭೆ ನಡೆಸಿದ್ದೇವೆ. 10ರಿಂದ 12 ಬಾರಿ ಸರ್ವೆ ನಡೆಸಿದ್ದೇವೆ. ಈ ಎಲ್ಲರ ಬಗ್ಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರು ನಮ್ಮ ಕರ್ನಾಟಕದವರೇ, ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಎಲ್ಲಾ ಗೊತ್ತಿದೆ. ಅವರಿಗೆ ಹೊಸದಾಗಿ ಏನೋ ಹೇಳೋದು ಬೇಡ, ನಾನು ಪೂಜಾರಿ ಅಷ್ಟೇ, ನಂದು ತೀರ್ಮಾನ ಅಲ್ಲಾ. ಜನ ಹೇಳೋದು ದೇವರಿಗೆ ತಲುಪಿಸೋದು ಅಷ್ಟೇ ನನ್ನ ಕೆಲಸ. ನಮಗೆ ಗೆಲುವೇ ಮಾನದಂಡ ಎಂದು ಹೇಳಿದರು.
ಎಲ್ಲೆಲ್ಲ ಯುವಕರಿಗೆ ಗೆಲ್ಲೊ ಅವಕಾಶ ಇದೆ, ಅಲ್ಲೆಲ್ಲ ಟಿಕೆಟ್ ಕೊಡ್ತೀವಿ, ಗೆಲ್ಲುವ ಅವಕಾಶ ಇರುವ ಕಡೆ ಯುವಕರು, ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ. ಬಹುತೇಕ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರು ಗೆಲ್ತಾರೆ ಅಂದ್ರೆ ಟಿಕೆಟ್ ಕೊಟ್ಟರು ತಪ್ಪೇನು? ಎಂದು ಪ್ರಶ್ನಿಸಿದರು.
ಎಲ್ಲರಿಗೂ ಸಮಾಧಾನ ಮಾಡೋಕೆ ಆಗೋಲ್ಲ. ಎಲ್ಲರಿಗೂ ಟಿಕೆಟ್ ಕೊಡೋಕೆ ಆಗಲ್ಲ. ನಾವು ಈ ಹಿಂದೆ ಸರ್ಕಾರ ಇದ್ದಾಗ್ಲೂ ಸಹ ಸುಮ್ಮನೆ ಕೂತಿಲ್ವಾ? ಕೆಲವೊಮ್ಮೆ ತ್ಯಾಗ ಮಾಡ್ಬೇಕು. ನಮ್ಮ ಎಲ್ಲಾ ಶಾಸಕರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ ಡಿ ಕೆ ಶಿವಕುಮಾರ್ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸುಳಿವು ನೀಡಿದ್ದಾರೆ.












Click it and Unblock the Notifications