ಎರಡು ಕೊರೊನಾ ಲಸಿಕೆ ಪಡೆದರೂ ಡೆಲ್ಟಾ ಡೇಂಜರಸ್!
ನವದೆಹಲಿ, ಜುಲೈ 05: ಎರಡು ಕೊರೊನಾ ಲಸಿಕೆ ಪಡೆದರೂ ಕೂಡ ಡೆಲ್ಟಾ ಡೇಂಜರಸ್ ಎನ್ನುವ ಮಾಹಿತಿಯನ್ನು ಐಸಿಎಂಆರ್ ನೀಡಿದೆ.
ಎರಡೂ ಡೋಸ್ ಲಸಿಕೆ ಪಡೆದ ಶೇ.16.1ರಷ್ಟು ಮಂದಿಯಲ್ಲಿ ರೂಪಾಂತರಿ ಕೊರೊನಾವೈರಸ್ ಆಗಿರುವ ಡೆಲ್ಟಾ ವಿರುದ್ಧ ಪ್ರತಿಕಾಯಗಳು ಕಂಡುಬಂದಿಲ್ಲ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕೇವಲ ಒಂದು ಡೋಸ್ ಲಸಿಕೆ ಪಡೆದ ಬರೋಬ್ಬರಿ ಶೇ.58.1ರಷ್ಟು ಜನರಲ್ಲಿ ಪ್ರತಿಕಾಯ ಗೋಚರವಾಗುತ್ತಿಲ್ಲ ಎಂದು ವರದಿ ಹೇಳಿದೆ.

ವೇಗವಾಗಿ ಹಬ್ಬುತ್ತಿರುವ ಡೆಲ್ಟಾ ಸೋಂಕು
ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ದೇಶದಲ್ಲಿ ಎರಡನೇ ಅಲೆ ಅಬ್ಬರಿಸಲು ಕಾರಣ ಎನ್ನಲಾದ ಡೆಲ್ಟಾ ವೈರಸ್ ಅತ್ಯಂತ ವೇಗವಾಗಿ ಹಬ್ಬುವ ಕೊರೊನಾ ಸೋಂಕಾಗಿದೆ. ಈಗಾಗಲೇ ವಿಶ್ವದ 100 ದೇಶಗಳಿಗೆ ಇದು ಹಬ್ಬಿದ್ದು, ಆ ದೇಶಗಳನ್ನು ಭೀತಿಗೆ ದೂಡಿದೆ.

ಪ್ರತಿಕಾಯಗಳು ಕಂಡುಬರುತ್ತಿಲ್ಲ
ಇಂತಹ ಸಂದರ್ಭದಲ್ಲಿ ಈ ವೈರಸ್ ವಿರುದ್ಧ ಪ್ರತಿಕಾಯವೇ ಕಂಡುಬರುತ್ತಿಲ್ಲದಿರುವುದು ಲಸಿಕೆಯ ಕ್ಷಮತೆಯನ್ನು ಪ್ರಶ್ನಿಸುವಂತಿದೆ. ಲಸಿಕೆ ಪಡೆದವರೂ ಜಾಗ್ರತೆಯಿಂದ ಇರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಆ ವರದಿ ಮತ್ತಷ್ಟು ನಿಷ್ಕರ್ಷೆಗೆ ಒಳಪಡಬೇಕಿದೆ.

5 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ
ಕೊರೊನಾ ವೈರಸ್ ಪ್ರಕರಣಗಳಲ್ಲಿ ಇನ್ನಷ್ಟು ಇಳಿಕೆ ಆಗಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 43,071 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3.05 ಕೋಟಿಗೆ ಏರಿಕೆಯಾಗಿದೆ.

ತಜ್ಞರು ಹೇಳುವುದೇನು?
''ಕೊರೊನಾ ಲಸಿಕೆ ಪಡೆದವರಲ್ಲಿ ಡೆಲ್ಟಾ ವಿರುದ್ಧ ಪ್ರತಿಕಾಯ ಗೋಚರವಾಗಿಲ್ಲ ಎಂದಾಕ್ಷಣ ಅದು ಇಲ್ಲವೇ ಇಲ್ಲ ಎಂದರ್ಥವಲ್ಲ, ಪ್ರತಿಕಾಯಗಳ ಪ್ರಮಾಣ ಕಡಿಮೆ ಇರಬಹುದು, ಅವು ಪತ್ತೆಯಾಗದೇ ಇರಬಹುದು, ಆದರೂ ಅವರು ಇರುತ್ತವೆ. ವ್ಯಕ್ತಿಯನ್ನು ಸೋಂಕು ಹಾಗೂ ಸೋಂಕಿನ ಗಂಭೀರತೆಯಿಂದ ರಕ್ಷಿಸುತ್ತದೆ'' ಎಂದು ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಇಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಡಾ. ಟಿ. ಜಾಕೋಬ್ ಜಾನ್ ಹೇಳಿದ್ದಾರೆ.












Click it and Unblock the Notifications