ಅವಧಿಗೂ ಮುನ್ನ ಲೋಕಸಭಾ ಚುನಾವಣೆಗೆ ಬಿಜೆಪಿ ಸರ್ಕಾರದ ಸಿದ್ಧತೆ?
ಪಾಟ್ನಾ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ ಮುಂದುವರಿದಿದೆ. ಅದರಲ್ಲೂ ವಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಈಗ ಅವಧಿಗೂ ಮೊದಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ಸಾಗಿದೆ ಅಂತಿದ್ದಾರೆ ನಿತೀಶ್! ಹಾಗಾದ್ರೆ ನಿತೀಶ್ ಕುಮಾರ್ ದಿಢೀರ್ ಈ ಮಾತು ಹೇಳಿದ್ದೇಕೆ? ಮುಂದೆ ಓದಿ.
ಹೇಗಾದರೂ ಮಾಡಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಕ್ಕೂಟಕ್ಕೆ ಸೋಲು ಕಾಣಿಸಬೇಕು ಅನ್ನೋದೆ ನಿತೀಶ್ ಕುಮಾರ್ ಗುರಿ. ಹಾಗೇ ಮತ್ತೊಂದು ಕಡೆ ವಿಪಕ್ಷಗಳು ಕೂಡ ಬಿಜೆಪಿ ಸೋಲಿಗೆ ಕಾಯುತ್ತಿವೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ವಿರೋಧ ಪಕ್ಷಗಳನ್ನ ಒಂದೇ ವೇದಿಕೆಗೆ ತಂದು ನಿಲ್ಲಿಸುವ ಯತ್ನ ಕೂಡ ಸಾಗಿದೆ. ಆದ್ರೆ ಅದು ಕೈಗೂಡುತ್ತಿಲ್ಲ, ಸಭೆ ನಡೆಸೋಕೆ ಪರದಾಡುವ ಪರಿಸ್ಥಿತಿ ವಿರೋಧ ಪಕ್ಷಗಳ ನಡುವೆ ಉದ್ಭವಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಒಮ್ಮೆ ಸಭೆ ಕೂಡ ರದ್ದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ ನಿತೀಶ್ ಕುಮಾರ್. ಹಾಗಾದ್ರೆ ನಿತೀಶ್ ಕುಮಾರ್ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಪಕ್ಷಗಳ ಒಗ್ಗಟ್ಟು, ಬಿಜೆಪಿಗೆ ದಿಗಿಲು?
ಹೌದು, ಬಿಹಾರ ಸಿಎಂ ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಾಗೇ ವಿಪಕ್ಷಗಳ ಬಲ ಎಷ್ಟಿದೆ ಎಂಬುದನ್ನ ಪರೋಕ್ಷವಾಗಿಯೇ ಆಡಳಿತ ಪಕ್ಷಕ್ಕೆ ತಿಳಿಸಲು ಯತ್ನಿಸಿದ್ದಾರೆ. 'ವಿಪಕ್ಷಗಳ ಒಗ್ಗಟ್ಟು ಸಾಧಿಸುವ ಪ್ರಯತ್ನಕ್ಕೆ ವೇಗ ಸಿಕ್ಕಿದ್ದು, ಬಿಜೆಪಿಗೆ ಇದರಿಂದಾಗಿ ದಿಗಿಲು ಹುಟ್ಟಿದೆ. ಹೀಗಾಗಿ ಬಿಜೆಪಿ ಅವಧಿಗೂ ಮುನ್ನ ಲೋಕಸಭೆ ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿರುವುದು ಸಂಚಲನ ಸೃಷ್ಟಿಮಾಡಿದೆ. ಅಲ್ಲದೆ, ಬಿಜೆಪಿ ವಿರುದ್ಧ ಒಗ್ಗಟ್ಟು ಸಾಧಿಸುವ ಕುರಿತು ಜೂನ್ 23ರಂದು ನಡೆಯುವ ಸಭೆಯಲ್ಲಿ ವಿರೋಧ ಪಕ್ಷಗಳು ನಿರ್ಧಾರ ಕೈಗೊಳ್ಳಲಿವೆ ಎಂದಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವಧಿ ಉಲ್ಲೇಖ
ಇದೇ ವೇಳೆ ಮತ್ತೊಂದು ಉದಾಹರಣೆಯ ಮೂಲಕ ಕೇಂದ್ರದ, ಪಿಎಂ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಅವಧಿಗೂ ಮುನ್ನ ಚುನಾವಣೆಗೆ ಹೋಗಲು ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಕ್ಕೆ ಅವಕಾಶ ಇರುತ್ತದೆ. ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಇಷ್ಟ ಇಲ್ಲದಿದ್ದರೂ 2004ರಲ್ಲಿ ಅವಧಿಗೂ ಮುನ್ನ ಚುನಾವಣೆಗೆ ಹೋಗಬೇಕಾಯಿತು' ಎಂದಿದ್ದಾರೆ. ಹೀಗೆ ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ವಾಗ್ದಾಳಿ ಮುಂದುವರಿಸಿದ್ದಾರೆ. ಆದರೆ ಇದು ಲೋಕಸಭೆ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ವಿಪಕ್ಷ ನಾಯಕರ ಕೈಹಿಡಿಯುತ್ತೆ ಅನ್ನೋದನ್ನ ಕಾದು ನೋಡಬೇಕು.

ಬಿಜೆಪಿ ನಾಯಕರಿಂದಲೂ ಒಕ್ಕೂಟ ರಚನೆ?
ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ BJP ಮುಂದಾಗಿದೆ ಎಂಬ ಮಾತು ಕೇಳಿಬಂದಿತ್ತು. ಇದು ನಿಜವಾಗಿದ್ದೇ ಆದರೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬಿಜೆಪಿ ಒಕ್ಕೂಟ ಮತ್ತಷ್ಟು ಪ್ರಬಲ ಪ್ರತಿಸ್ಪರ್ಧೆಯನ್ನ ನೀಡುವುದು ಬಹುತೇಕ ಖಚಿತ. ಈ ಮೂಲಕ 2024ರ ಚುನಾವಣೆಯಂತು ಹೈವೋಲ್ಟೇಜ್ ಆಗೋದು ಗ್ಯಾರಂಟಿ.
ಒಟ್ಟಾರೆ ಹೇಳುವುದಾದರೆ 2024ರ ಲೋಕಸಭೆ ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇದೆ. ಅದಾಗಲೇ ಲೆಕ್ಕಾಚಾರ ಶುರುವಾಗಿವೆ. ಆದ್ರೆ ಇದೆಲ್ಲಾ ಮತದಾರನ ಮನ ಗೆಲ್ಲುವಲ್ಲಿ ಹಾಗೂ ಮತಗಳನ್ನು ಸೆಳೆಯುವಲ್ಲಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತೆ ಅನ್ನೊದನ್ನ ಕಾದು ನೋಡಬೇಕು. ಆದ್ರೆ ಈಗಿನ ಪರಿಸ್ಥಿತಿ ನೋಡಿ ಹೇಳುವುದಾದರೆ 2024ರ ಕೇಂದ್ರ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿರುವುದು ಬಹುತೇಕ ಪಕ್ಕಾ ಎನ್ನಬಹುದು.












Click it and Unblock the Notifications