Bengaluru-Mumbai Expressway: 14 ಪಥಗಳ ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ವೇ ಘೋಷಣೆ-ಮಾಹಿತಿ, ವಿವರ ಇಲ್ಲಿದೆ
Bengaluru-Mumbai Expressway: ದೇಶದದ ಎರಡು ಬೃಹತ್ ನಗರಗಳ ನಡುವೆ ಹೊಸ 14 ಪಥಗಳ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಘೋಷಣೆ ಮಾಡಿದ್ದಾರೆ. ಹಾಗಾದರೆ ಯಾವೆಲ್ಲಾ ನಗರಗಳ ಮೂಲಕ ಈ ಹೆದ್ದಾರಿ ಹಾದುಹೋಗಲಿದೆ ಹಾಗೂ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪುಣೆಯಲ್ಲಿ ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಗಳೂರು-ಸಂಭಾಜಿ-ಮುಬೈ ನಡುವಿನ 14 ಪಥಗಳ ಹೆದ್ದಾರಿ ಯೋಜನೆಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಘೋಷಣೆ ಮಾಡಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಈ ಹೊಸ ಹೆದ್ದಾರಿಯು ಮುಬೈನ ಅಟಲ್ ಸೇತುವೆಯಿಂದ ಶುರುವಾಗಲಿದ್ದು, ಪುಣೆ ರಿಂಗ್ ರಸ್ತೆ ಮೂಲಕ ಹಾದುಹೋಗಲಿದೆ. ಇನ್ನು ಇದು ಬೆಂಗಳೂರು-ಸಂಭಾಜಿನಗರದಂತಹ ಪ್ರಮುಖ ನಗರಗಳ ನಡುವೆ ಹಾದುಹೋಗಲಿದೆ. ಅಂತಿಮವಾಗಿ ಪುಣೆ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ.
ಬೆಂಗಳೂರು-ಮುಂಬೈ 14 ಪಥದ ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಇದೀಗ ಇರುವ ಮುಂಬೈ ಎಕ್ಸ್‌ಪ್ರೆಸ್‌ನಲ್ಲಿ 50ರಷ್ಟು ವಾಹನ ದಟ್ಟಣೆ ತಗ್ಗಲಿದೆ. ಮುಂದಿನ 6 ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಪ್ರಯೋಜನೆಗಳೇನು.?: ಈ ಯೋಜನೆಯು ದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವ ಮಹತ್ವದ ಭಾಗವಾಗಿದೆ. ಮೂಲಸೌಕರ್ಯಗಳ ಹೆಚ್ಚಾದಂತೆಲ್ಲ ಗ್ರಾಮೀಣ ಜನರ ಮತ್ತು ನಗರ ಬಡವರ ಜೀವನದ ಗುಣಮಟ್ಟವನ್ನು ಸುಧಾರಣೆಯಾಗಲಿದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
ಹೊಸ ರಸ್ತೆಗಳ ಅಭಿವೃದ್ಧಿಯಲ್ಲಿ ಎಂಟು ಮಿಲಿಯನ್ ಟನ್ ತ್ಯಾಜ್ಯವನ್ನು ಈಗಾಗಲೇ ಮರುಬಳಕೆ ಮಾಡಲಾಗಿದೆ. ಇದು ಹಲವು ಸವಾಲುಗಳನ್ನು ಹೇಗೆ ಅವಕಾಶಗಳಾಗಿ ಪರಿವರ್ತಿಸಬಹುದು ಎಂಬುದನ್ನು ತೋರಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಶೋಧನೆಗೆ ವಿಶಾಲವಾದ ಪ್ರದೇಶಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಬಡವರ ಬದುಕನ್ನು ಉನ್ನತೀಕರಿಸಿದರೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದರೆ ಮಾತ್ರ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ. ರೈತರು ಮತ್ತು ಗ್ರಾಮೀಣ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸಲಿದ್ದು, ಈ ಮೂಲಕ ನಗರಗಳಿಗೆ ವಲಸೆ ಹೋಗುವವರ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರು.
ಇಂಜಿನಿಯರ್‌ಗಳ ದಿನಾಚರಣೆಯ ಅಂಗವಾಗಿ ಗಡ್ಕರಿ ಅವರು ಭಾರತೀಯ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು ವಿಶ್ವೇಶ್ವರಯ್ಯ ಅವರು ಗುಜರಾತ್‌ಗೆ ತೆರಳುವ ಮೊದಲು 28 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರು ಹಲವಾರು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.
ಇನ್ನು ಹೊಸ 14-ಲೇನ್ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮುಂಬೈಯನ್ನು ಸಂಪರ್ಕಿಸುತ್ತದೆ. ಇಲ್ಲಿ ಎರಡು ಮಾರ್ಗಗಳನ್ನು ಕಾಣಬಹುದಾಗಿದೆ. ಒಂದು NH48 ಮೂಲಕ ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈ ಮಾರ್ಗವಾಗಿದ್ದು, ಇದು 986 ಕಿಲೋ ಮೀಟರ್ ಉದ್ದವಾಗಿದೆ. ಮತ್ತೊಂದು ಮಾರ್ಗವು ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ ಮತ್ತು ಬಾಗಲಕೋಟೆ ಮೂಲಕ ಹಾದು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲಿದ್ದು, ಇದು ಸುಮಾರು 900 ಕಿ.ಮೀ. ಉದ್ದ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಇನ್ನೂ ಫೈನಲ್ ಆಗಿಲ್ಲ. ಇನ್ನೂ ಯಾವೆಲ್ಲ ಮಾರ್ಗಗಳ ಮೂಲಕ ಈ ಹೆದ್ದಾರಿ ಹಾದುಹೋಗಲಿದೆ ಎನ್ನುವ ನಿಖರ ಮಾಹಿತಿ ತಿಳಿದುಬರಬೇಕಿದೆ.












Click it and Unblock the Notifications