ಅಯೋಧ್ಯೆಯಲ್ಲಿಯೇ ಜನ್ಮದಿನ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ
ಅಯೋಧ್ಯೆ, ಜನವರಿ 23: ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅಯೋಧ್ಯೆಯಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ತಾವು ತಂಗಿದ್ದ ಹೋಟೆಲ್ ನಲ್ಲಿಯೇ ಜನ್ಮದಿನ ಆಚರಿಸಿಕೊಂಡ ಅವರು, ತಮ್ಮ ತಾತನವರಾದ ದೇವೇಗೌಡರು, ಅಜ್ಜಿಯವರಾದ ಶ್ರೀಮತಿ ಚನ್ನಮ್ಮನವರು ಹಾಗೂ ತಂದೆಯವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಅಜ್ಜಿ, ತಾತನ ಜೊತೆಗೆ ನಿಖಿಲ್ ಕುಮಾರಸ್ವಾಮಿ ಕೇಕ್ ಕತ್ತರಿಸಿ ಜನ್ಮ ದಿನವನ್ನ ಆಚರಸಿಕೊಂಡಿದ್ದಾರೆ.

ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ನನ್ನ ಜನ್ಮದಿನ ಬಂದಿದ್ದು, ಅದೂ ಅಯೋಧ್ಯೆಯ ರಾಮ ಸನ್ನಿಧಿಯಲ್ಲೇ ಆಚರಿಸಿಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಸುಕೃತವೇ ಸರಿ ಎಂದು ನಟ ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇನ್ನೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ನಿಖಿಲ್ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಆತ್ಮೀಯ ಸಹೋದರ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಅಯೋಧ್ಯೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಮಗೆ ಪ್ರಭು ಶ್ರೀರಾಮಚಂದ್ರನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಶುಭ ಹಾರೈಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಈ ಕುರಿತು ಟ್ವೀಟ್ ಮಾಡಿದ್ದು, ನನ್ನ ಮೊಮ್ಮಗ, ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಪ್ರಭು ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಜನಸೇವೆ ಮಾಡಲು ಹೆಚ್ಚಿನ ಅವಕಾಶಗಳನ್ನು ನೀಡಲಿ ಹಾಗು ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಣ್ಯರ ಗ್ಯಾಲರಿಯಲ್ಲಿ ಆಸೀನರಾಗಿದ್ದ ಮಾಜಿ ಪ್ರಧಾನಿಗಳ ಕುಟುಂಬದವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಾಗೂ ಭವ್ಯ ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಂಡರು.
ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರ ಗಣ್ಯರಿಗೆ ಶುಭ ಕೋರಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಧನ್ಯವಾದ ಹೇಳಿದರು. ಇದಕ್ಕೆ ಪ್ರತಿಯಾಗಿ ದೇವೇಗೌಡರು, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಅಭಿವಂದನೆ ಸಲ್ಲಿಸಿದರು.
ಇದೇ ವೇಳೆ ರಾಜ್ಯದಿಂದ ಅಯೋಧ್ಯಗೆ ತೆರಳಿದ್ದ ಗಣ್ಯರು, ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಗಣ್ಯಾತಿಗಣ್ಯರು ಮಾಜಿ ಪ್ರಧಾನಿಗಳು ಆಸೀನರಾಗಿದ್ದ ಜಾಗಕ್ಕೆ ಬಂದು ಕುಶಲೋಪರಿ ವಿಚಾರಿಸಿದರು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಅವರು ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳ ಕುಟುಂಬದೊಂದಿಗೆ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರು ಇದ್ದರು.












Click it and Unblock the Notifications