ಈ ವರ್ಣರಂಜಿತ ಚಿತ್ರಗಳ ತೂಕವೇ ಬೇರೆಯದು!
ಬೆಂಗಳೂರು, ಏ. 4 : ಶನಿವಾರ ವಿಶ್ವದಾದ್ಯಂತ ಬಿಡುವಿಲ್ಲದ ಚಟುವಟಿಕೆ. ಟೆಕ್ಕಿಗಳಿಗೆ ವೀಕೆಂಡ್ ರಜಾ ಇದ್ದರೇನಂತೆ, ಆಗಸದಲ್ಲಿ ಚಮತ್ಕಾರ ತೋರಲು ನಿಂತಿರುವ ಹುಣ್ಣಿಮೆಯ ಚಂದ್ರನಿಗೆ, ಮೈಸೂರಿನ ಮರವೊಂದರಲ್ಲಿ ಆಹಾರಕ್ಕಾಗಿ ಕಿತ್ತಾಡುತ್ತಿರುವ ಹಕ್ಕಿಗಳಿಗೆ, ಶ್ರೀನಗರದಲ್ಲಿ ಅರಳುತ್ತಿರುವ ಟ್ಯೂಲಿಪ್‌ಗಳಿಗೆ, ಪುಢಾರಿಗಳಿಗೆ ಶನಿವಾರ ಫುಲ್ ಡ್ಯೂಟಿ.
ತಾನು ಸೈಲೆಂಟಾಗಿದ್ದರೂ ಆಸ್ತಿಕರಿಗೆ, ನಾಸ್ತಿಕರಿಗೆ, ವಿಜ್ಞಾನಿಗಳಿಗೆ, ಶ್ರೀಸಾಮಾನ್ಯರಿಗೆ ವಿಪರೀತ ಕೆಲಸ ಕೊಟ್ಟವನೆಂದರೆ ಶೂನ್ಯಾಕಾರ ಪಡೆದಿದ್ದ ಹಂಸಬಿಳಿಯ ಚಂದ್ರಾಮ. ರಾಹುಗ್ರಸ್ಥ ಚಂದ್ರಗ್ರಹಣ ಸಂಭವಿಸಿದ ಸಂದರ್ಭದಲ್ಲಿ ಮಂತ್ರಪಠಣದಲ್ಲಿ ಒಂದಿಷ್ಟು ಜನರು ಕಾಲ ಕಳೆದರೆ, ವಿಜ್ಞಾನಿಗಳು ದುರ್ಬೀನು ಹಿಡಿದು ಬೆಳಕು-ನೆರಳಿನಾಟವನ್ನು ಇಂಚಿಂಚು ಸವಿಯುತ್ತಿದ್ದರು.
ಇನ್ನೊಂದೆಡೆ ಇದಾವುದರ ಅರಿವೇ ಇಲ್ಲದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ಸಾಗುತ್ತಿತ್ತು. ರಾಜಸ್ತಾನದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಕಳೆದುಕೊಂಡ ರೈತ ಕನಲುತ್ತಿದ್ದರೆ, ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಗಿಸಿದ ನರೇಂದ್ರ ಮೋದಿಯವರು ಮೋಡ ಮುಸುಕಿದ ಬೆಂಗಳೂರಿಗೆ ಟಾಟಾ ಹೇಳಿ ದೆಹಲಿಯ ವಿಮಾನವೇರಿದರು.
ಪತ್ರಕರ್ತರನ್ನು ಸದಾ ಚಟುವಟಿಕೆಯಿಂದಿಡುವ ಸುದ್ದಿಗಳದ್ದು ಒಂದು ತೂಕವಾದರೆ, ಸುದ್ದಿಗೆ ಮತ್ತಷ್ಟು ಜೀವ ತುಂಬುವ ವರ್ಣರಂಜಿತ ಚಿತ್ರಗಳ ತೂಕವೇ ಬೇರೆಯದು. ಸಾವಿರ ಪದಗಳಿಗೆ ಸಮವಾಗಿರುವ ಒಂದಿಷ್ಟು ಚಿತ್ರಗಳನ್ನು ಈ ಸ್ಲೈಡುಗಳಲ್ಲಿ ನೋಡಿ. ಇಲ್ಲಿ ಒಂದಿಷ್ಟು ಅಚ್ಚರಿ ತುಂಬುವ ಚಿತ್ರಗಳಿವೆ, ಆನಂದಿಸಿ. [ಚಂದ್ರಗ್ರಹಣ : ಜ್ಯೋತಿಷಿಯ ಮಾರ್ಗದರ್ಶಿ] [ಚಿತ್ರಗಳು : ಪಿಟಿಐ]

ಚಂದಿರ ತಂದ ಹುಣ್ಣಿಮೆ ರಾತ್ರಿಯಲಿ
ಜಾರ್ಖಂಡ್ ರಾಜಧಾನಿ ರಾಂಚಿಯ ಶುಭ್ರಾಕಾಶದಲ್ಲಿ, ಭೂಮಿಯ ನೆರಳಿನಿಂದಾಗಿ ಅರ್ಧ ಮರೆಮಾಚಿಕೊಂಡು ನಾಚುವ ಚಂದಿರನ ಸೌಂದರ್ಯವ ನೋಡಿದಿರಾ?

ಜಪಾನಿನಲ್ಲಿ ಖಗ್ರಾಸ್ ಚಂದ್ರಗ್ರಹಣ
ದಕ್ಷಿಣ ಜಪಾನದ ಉರಾಸೋ ನಗರದ ಆಗಸದಲ್ಲಿ ಬೆಳದಿಂಗಳು ಚೆಲ್ಲುತ್ತಲೇ ನೆರಳು ಬೆಳಕಿನಾಟವ ಆಡುತ್ತಿರುವ ಚಂದಿರನ ಅಂಗಳದ ದಿಗ್ ದರ್ಶನ.

ಕಣ್ಣಿಗೆ ಕನ್ನಡಕ ಹಾಕಿರುವ ಈ ಬಾಲಕಿ ಯಾರು ಗೊತ್ತಾ?
ಈ ಬಾಲಕಿಯ ಜಾತಿ ಯಾವುದೆಂದು ಕೇಳಬೇಡಿ ಪ್ಲೀಸ್. ಆದರೆ, ಮುಂಬೈನಲ್ಲಿ ನಡೆದ ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಪ್ರಥಮ ಸ್ಥಾನ ಗಳಿಸಿದ 13ರ ಬಾಲೆಯ ಹೆಸರು ಮಾರಿಯನ್ ಆಸಿಫ್ ಸಿದ್ದಿಕಿ. ಕಂಗ್ರಾಟ್ಸ್ ಹೇಳಿ.

ದೇಖಾ ಏಕ ಖಾಬ ತೋಯೆ ಸಿಲ್ ಸಿಲೆ ಹುಯೆ
ಶ್ರೀನಗರದ ಜಬರ್ವಾನ್ ಗುಡ್ಡಗಾಡಿನಲ್ಲಿ ಏಷ್ಯಾದ ಅತೀ ದೊಡ್ಡ ಟ್ಯೂಪಿಲ್ ಗಾರ್ಡನ್ ನಲ್ಲಿ ಅರಳಿರುವ ಪ್ರೇಮದ ಹೂವುಗಳು.

ಆಹಾರಕ್ಕಾಗಿ ಪ್ರಣಯ ಪಕ್ಷಿಗಳ ಕಾಳಗ
ಮೈಸೂರಿನ ಬಳಿ ನೀಲಿ ಬಾಲವಿರುವ ಬೀ ಹಂಟರ್ ಪಕ್ಷಿಗಳ ಚಿತ್ರ ಸೆರೆಹಿಡಿದ ಮಹಾನುಭಾವ ಫೋಟೋಗ್ರಾಫರ್ ತಾಳ್ಮೆಗೊಂದು ಸಲಾಂ.

ಇದು ಚಂದ್ರಗ್ರಹಣ ನಿಮಿತ್ತ ಮಾಡುತ್ತಿರುವ ಸ್ನಾನವಲ್ಲ
ಆಸ್ತಿಕರು ಚಂದ್ರಗ್ರಹಣದ ನಿಮಿತ್ತ ನದಿಯಲ್ಲಿ, ಮನೆಯಲ್ಲಿ ಸ್ನಾನ, ಪೂಜೆ, ಮಂತ್ರ ಪಠಣದಲ್ಲಿ ತೊಡಗಿದ್ದರೆ, ಮುಂಬೈನಲ್ಲಿ ಈಜುಗೊಳದಲ್ಲಿ ಈಜಿನ ಆನಂದ ಪಡೆಯುತ್ತಿರುವ ಲೆಜೆಂಡರಿ ಸ್ವಿಮ್ಮರ್ ಮೈಕಲ್ ಫೆಲ್ಪ್ಸ್.

ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಸಾರ್
ಮೂರು ದಿನಗಳ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮುಕ್ತಾಯದ ನಂತರ ಉಭಯ ಕುಶಲೋಪರಿಯಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದಸ್ಯರಿಗೆ ಟಿಪ್ಸ್ ನೀಡುತ್ತಿದ್ದಾರೆ.

ಪುಟ್ಟ ಪುಟಾಣಿಯನ್ನು ಹಾಗಾ ಎತ್ತಿಕೊಳ್ಳುವುದು?
ರಾಂಚಿಯ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುದ್ದಿನ ಮಗಳು ಮತ್ತು ಮುದ್ದಿನ ಹೆಂಡತಿ ಸಾಕ್ಷಿಯೊಂದಿಗೆ ಎಂಎಸ್ಡಿ. ಅದೇನೇ ಇರಲಿ, ಪುಟ್ಟ ಪುಟಾಣಿಯನ್ನು ಹಾಗಾ ಎತ್ತಿಕೊಳ್ಳುವುದು?

ಫ್ಯಾಬ್ ಇಂಡಿಯಾನಲ್ಲಿರುವ 'ಹಿಡನ್' ಕ್ಯಾಮೆರಾ
ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಫ್ಯಾಬ್ ಇಂಡಿಯಾ ಮಾಲ್ ನಲ್ಲಿ ಚೇಂಜಿಂಗ್ ರೂಮ್ ಹೊರಗಿರುವ ಕ್ಯಾಮೆರಾ ಒಳಗಿರುವುದನ್ನು ಸೆರೆ ಹಿಡಿಯುವುದಾ?

ಈ ಚಿತ್ರ ಏನನ್ನು ಹೇಳುತ್ತಿದೆ?
ದಯವಿಟ್ಟು ಈ ಚಿತ್ರಕ್ಕೆ ನೀವೇ ಒಂದು ಅಡಿಬರಹ ಕೊಟ್ಟುಬಿಡಿ. ಅಡ್ವಾಣಿಗೆ ಅಮಿತ್ ಶಾ ಏನೋ ಹೇಳುತ್ತಿರುವಂತಿದೆ?

ಜನರನ್ನು ಮೂರ್ಖರನ್ನಾಗಿ ಮಾಡಬೇಡ್ರೀ
ಬೆಂಗಳೂರಿನ ಬೀದಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತ, ಜನರನ್ನು ಹೇಗೆ ಮೂರ್ಖರನ್ನಾಗಿ ಮಾಡಬೇಕೆಂದು ಕಾರ್ಯಕರ್ತರಿಗೆ ತರಬೇತಿ ನೀಡಲು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯಲಾಗಿತ್ತು ಎಂದು ದೂರಿದ್ದಾರೆ. ಹೌದೇನ್ರೀ ಅಮಿತ್ ಶಾ?

ಬಾನಂಗಳದಲ್ಲಿ ಬಿರಿದ ಕಿತ್ತಳೆ ಹಣ್ಣು
ಮಾಗಿದ ಕಿತ್ತಳೆ ಹೊಂಬಣ್ಣಕ್ಕೆ ತಿರುಗಿದ ಚಂದಿರ ಚೆನ್ನೈನ ಮರೀನಾ ಬೀಚ್ ನಲ್ಲಿ ಕಂಡಂತೆ. ಚಂದ್ರಗ್ರಹಣದ ರಮ್ಯ ದೃಶ್ಯ.












Click it and Unblock the Notifications