Tirupati: ಟಿಟಿಡಿಯಿಂದ ಗುಡ್ ನ್ಯೂಸ್: ತಿಮ್ಮಪ್ಪನ ಆಶೀರ್ವಾದದೊಂದಿಗೆ ನವ ವಿವಾಹಿತರ ಮನೆಗೆ ಬರಲಿದೆ ಪ್ರಸಾದ!
ಮದುವೆಯೊಂದಿಗೆ ಹೊಸ ಜೀವನ ಆರಂಭಿಸಲಿರುವ ಜೋಡಿಗಳಿಗೆ ಟಿಟಿಡಿ ಸಿಹಿ ಸುದ್ದಿ ನೀಡಿದೆ. ನವವಿವಾಹಿತರಿಗೆ ಶ್ರೀವಾರಿಯ ಆಶೀರ್ವಾದ ಪಡೆಯಲು ತಿರುಮಲ ದೇವಸ್ಥಾನದ ಆಡಳಿ ಮಂಡಳಿ ಒಂದು ಅವಕಾಶವನ್ನು ಒದಗಿಸುತ್ತಿದೆ.
ಅದೇನೆಂದರೆ ನವ ದಂಪತಿಗಳು ಸಂಪೂರ್ಣ ವಿಳಾಸದೊಂದಿಗೆ ತಮ್ಮ ವಿವಾಹ ಪತ್ರವನ್ನು ತಿರುಮಲ ದೇವಸ್ಥಾನಕ್ಕೆ ಕಳುಹಿಸಬೇಕು. ಇದು ತಲುಪಿದ ಕೂಡಲೆ ದಂಪತಿಗಳಿಗೆ ತಿಮ್ಮಪ್ಪನ ದೇವಸ್ಥಾನದಿಂದ ಅರಿಶಿನ, ಕುಂಕುಮ, ಬಳೆಗಳು, ಕಲ್ಯಾಣ ಪುಸ್ತಕ, ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ. ಈ ಮೂಲಕ ಮದುವೆ ಶುಭ ಸಮಾರಂಭದಲ್ಲಿ ದಂಪತಿಗಳು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆಯಲಿದ್ದಾರೆ.

ಈ ನೀತಿ ಮೊದಲು ಜಾರಿಯಲ್ಲಿತ್ತು. ಆದರೆ ಕೊರೊನಾ ಕಾರಣದಿಂದ ಟಿಟಿಡಿ ಇದನ್ನು ನಿಲ್ಲಿಸಿತ್ತು. ಮತ್ತೆ ಈ ಅವಕಾಶವನ್ನು ನವ ಜೋಡಿಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ನವವಿವಾಹಿತರು ವಿವಾಹ ಪತ್ರವನ್ನು 'ವೆಂಕಟೇಶ್ವರ ಸ್ವಾಮಿ, ಇಒ ಕಚೇರಿ, ಟಿಟಿಡಿ ಆಡಳಿತ ಕಟ್ಟಡ, ಕೆಟಿ ರಸ್ತೆ, ತಿರುಪತಿ 517501' ಇವರಿಗೆ ಕಳುಹಿಸಬೇಕು. ಅಲ್ಲದೆ ಅವರು ತಮ್ಮ ಸಂಪೂರ್ಣ ವಿಳಾಸವನ್ನು ಇದರೊಂದಿಗೆ ಕಳುಹಿಸಬೇಕು.
ಈ ವಿವಾಹ ಪತ್ರ ತಲುಪಿದ ಕೂಡಲೆ ಶ್ರೀ ಪದ್ಮಾವತಿ ದೇವಿಯ ಆಶೀರ್ವಾದದೊಂದಿಗೆ ಕುಂಕುಮ ಮತ್ತು ಕಂಕಣವನ್ನು ದಂಪತಿಗಳ ವಿಳಾಸಕ್ಕೆ ಕಳುಹಿಸಲಾಗುತ್ತದೆ. ನವದಂಪತಿಗಳಿಗೆ ಸಕಲ ಸೌಭಾಗ್ಯ ಸಿಗಲೆಂದು ಹಾರೈಸಿ ಶ್ರೀಗಳ ಆಶೀರ್ವಾದದೊಂದಿಗೆ ಟಿಟಿಡಿ ಪ್ರಸಾದವನ್ನು ಕಳುಹಿಸುತ್ತದೆ. ಹೆಚ್ಚಿನ ವಿವರಗಳಿಗೆ ಟಿಟಿಡಿಯನ್ನು ಸಂಪರ್ಕಿಸಿ. ಆದರೆ ಮದುವೆಗೆ ಒಂದು ತಿಂಗಳ ಮೊದಲು ಮದುವೆ ಕಾರ್ಡ್ ಕಳುಹಿಸಬೇಕು ಅನ್ನೋದು ನೆನಪಿರಲಿ. ಈ ಮದುವೆ ಪತ್ರ ತಲುಪಿದ ಕೂಡಲೆ ದೇವಸ್ಥಾನದಿಂದ ಪ್ರಸಾದ ಮದುವೆಗೂ ಮುನ್ನ ಅಥವಾ ಮದುವೆಯ ದಿನ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.

ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮ ಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.
ತಿರುಪತಿ ಇತಿಹಾಸ
ವಿಜಯನಗರ ಸಾಮ್ರಾಜ್ಯದ ಅಂತ್ಯದ ನಂತರ, ದೇವಾಲಯವು ಜುಲೈ 1656 ರಲ್ಲಿ ಗೋಲ್ಕೊಂಡದ ಕೈಗೆ ಹೋಯಿತು. 19ನೇ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟೀಷರು ದೇವಾಲಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದರು ಮತ್ತು ದೇವಾಲಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ. 1933 ರಲ್ಲಿ ಟಿಟಿಡಿ ಕಾಯಿದೆಯ ಪರಿಣಾಮವಾಗಿ ತಿರುಮಲ ತಿರುಪತಿ ದೇವಸ್ಥಾನಗಳ ರಚನೆಯಾಯಿತು.
ಇಲ್ಲಿನ ವೆಂಕಟೇಶ್ವರ ಸ್ವಾಮಿಯ ಮುಖ್ಯ ವಿಗ್ರಹವು ತುಂಬಾ ವಿಶಿಷ್ಟ ಮತ್ತು ಶಕ್ತಿಯುತವಾಗಿದೆ ಎಂದು ಹೇಳಲಾಗುತ್ತದೆ. ಆಕರ್ಷಕ ವಿಗ್ರಹವು ಹಲವಾರು ಪವಾಡದ ಲಕ್ಷಣಗಳನ್ನು ಹೊಂದಿದೆ. ಪ್ರತಿದಿನವೂ, ವಿಗ್ರಹವನ್ನು ಹೂವುಗಳಿಂದ, ಉಡುಪುಗಳಿಂದ ಮತ್ತು ಆಭರಣಗಳಿಂದಭವ್ಯವಾದ ಅಲಂಕರಿಸಲಾಗುತ್ತದೆ. ನಿತ್ಯ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಅಧಿಕ.












Click it and Unblock the Notifications