Ajit Pawar Death: ಮಾವ ಇದ್ದಾರೆ, ಅಳಿಯ ಹೋದರು: ಅಜಿತ್ ಪವಾರ್ ಸಾವಿನ ಸುತ್ತ ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸುದ್ದಿ ಹೊರಬೀಳುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ, ಅನುಮಾನ ಮತ್ತು ತತ್ವಜ್ಞಾನದ ಚರ್ಚೆಗಳು ಜೋರಾಗಿವೆ. ಕೇವಲ ಸುದ್ದಿ ಮಾಧ್ಯಮಗಳಲ್ಲದೆ, ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸಾಮಾನ್ಯ ಜನರು ತಮ್ಮದೇ ಆದ ದೃಷ್ಟಿಕೋನದಲ್ಲಿ ಈ ಘಟನೆಯನ್ನು ವಿಶ್ಲೇಷಿಸುತ್ತಿದ್ದಾರೆ.

ಮುಖ್ಯವಾಗಿ ಆಶಿಶ್ ಸರಡ್ಕ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಬದುಕಿನ ವಿಚಿತ್ರ ಮತ್ತು ರಾಜಕೀಯದ ವ್ಯಂಗ್ಯವನ್ನು ಎತ್ತಿ ತೋರಿಸಿವೆ. "ಮಾವ ಇದ್ದಾರೆ, ಅಳಿಯ ಹೋಗಿ ಆಯಿತು: ಬದುಕೆಷ್ಟು ವಿಚಿತ್ರ" ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. "ಇವತ್ತು ಅಜಿತ್ ಪವಾರ್ ಹೋದರು. ಶರದ್ ಪವಾರ್ ಸೋದರ ಅಳಿಯ. ಮಾವನಿಗೆ ವಯಸ್ಸಾಗಿದೆ. ಬೀಳುವ ಮರ, ಮಾವನ ನೆರಳಲ್ಲಿ ಇದ್ದರೆ ತಾನು ಬೆಳೆಯೋಕೆ ಸಾಧ್ಯವೇ ಇಲ್ಲ ಅಂತಾ NCP ಪಕ್ಷವನ್ನು ಹೋಳು ಮಾಡಿ ಬಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಮಾವ ಈಗಲೂ ಬದುಕಿದ್ದಾರೆ, ಅಳಿಯ ಇವತ್ತು ಹೋಗಿ ಆಯಿತು! ಬದುಕು ಎಷ್ಟು ವಿಚಿತ್ರ ಅಂತಾ ಇಲ್ಲೇ ಗೊತ್ತಾಗುತ್ತೆ ನೋಡಿ!"ಎಂದು ಆಶಿಶ್ ಅವರು ಅಜಿತ್ ಅವರ ರಾಜಕೀಯ ನಡೆ ಮತ್ತು ಈಗಿನ ಅವರ ಅಂತ್ಯವನ್ನು ಹೋಲಿಸಿ ಬರೆದಿದ್ದಾರೆ.
ಇನ್ನೊಂದೆಡೆ, ಈ ಸಾವು ಸಹಜವೋ ಅಥವಾ ಇದರ ಹಿಂದೆ ಬೇರೆ ಏನಾದರೂ ಇದೆಯೋ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಪಲ್ಲವಿ ಗೌಡ ಎಂಬುವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಇದು ದುರಂತವೋ ಯೋಜಿತ ಸಂಚೋ?" ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ನಡೆದ ಈ ಘಟನೆಯ ಬಗ್ಗೆ ವಿವರಿಸುತ್ತಾ, ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಚುನಾವಣೆ ಹತ್ತಿರವಿರುವಾಗ ಇಂತಹ ಘಟನೆ ನಡೆದಿರುವುದು ಸಹಜವಾಗಿಯೇ ಇಂತಹ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದು ಅವರ ಪೋಸ್ಟ್‌ನ ಸಾರಾಂಶವಾಗಿದೆ.
ಇನ್ನು ಎಕ್ಸ್ ಖಾತೆಯಲ್ಲಿ ವಿಕುಂತ್ ಎಂಬ ಬಳಕೆದಾರರು ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ ನೀಡುವ ಧಾಟಿಯಲ್ಲಿ ಬರೆದಿದ್ದಾರೆ. "ಅಧಿಕಾರ ಸಿಕ್ಕಾಗ ಜನರಿಗಾಗಿ ಏನಾದ್ರೂ ಮಾಡಿ" ಎಂದು ಅವರು ಸಲಹೆ ನೀಡಿದ್ದಾರೆ. ಸರ್ಕಾರಿ ದುಡ್ಡಲ್ಲಿ ಐಷಾರಾಮಿ ಜೀವನ ನಡೆಸುವುದು, ಸದಾ ವಿಮಾನದಲ್ಲೇ ಸುತ್ತಾಡುವುದು ಶಾಶ್ವತವಲ್ಲ. 7 ಬಾರಿ ಡಿಸಿಎಂ ಆದರೂ, ಸಿಎಂ ಆಗಬೇಕೆಂದು ಎಷ್ಟೇ ಆಸೆ ಪಟ್ಟರೂ ಅಂತಿಮವಾಗಿ ದೇಹ ಸುಟ್ಟು ಕರಕಲಾಗುತ್ತದೆ. ಜೀವನ ಏನೂ ಇಲ್ಲ ಎಂಬುದನ್ನು ಅಜಿತ್ ಪವಾರ್ ಸಾವು ತೋರಿಸಿಕೊಟ್ಟಿದೆ ಎಂದು ಅವರು ಆಕ್ರೋಶ ಮತ್ತು ವೇದಾಂತದ ಮಿಶ್ರಣದಲ್ಲಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಅಜಿತ್ ಪವಾರ್ ಅವರ ಸಾವು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಸುದ್ದಿಯಾಗಿ ಉಳಿಯದೆ, ಬದುಕು, ರಾಜಕೀಯ ಮತ್ತು ಸಾವಿನ ಕುರಿತಾದ ಗಂಭೀರ ಚರ್ಚೆಗೆ ವೇದಿಕೆಯಾಗಿದೆ.
https://x.com/vikunth71423952/status/2016396318604984534?s=20











Click it and Unblock the Notifications