NEET-UG: ನೀಟ್ ಪರೀಕ್ಷೆ ಹಗರಣ, ಸಿಬಿಐನಿಂದ ಮೊದಲ ಬಂಧನ
ನವದೆಹಲಿ, ಜೂನ್ 27: ನೀಟ್ ಪರೀಕ್ಷೆ ಹಗರಣದ ತನಿಖೆ ಕೈಗೊಂಡಿರುವ ಸಿಬಿಐ ಮೊದಲ ಆರೋಪಿ ಬಂಧಿಸಿದೆ. ಬಿಹಾರದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಎರಡು ಡಜನ್ ವಿದ್ಯಾರ್ಥಿಗಳಿಗೆ ಆರೋಪಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ ಆರೋಪವಿದೆ.
ಗುರುವಾರ ಸಿಬಿಐ ಬಿಹಾರದಲ್ಲಿ ಮನೀಶ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದೆ. ಖಾಲಿ ಇರುವ ಶಾಲಾ ಕೊಠಡಿಯಲ್ಲಿ ಆರೋಪಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಿದ್ದ. ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಹಗರಣ ಇದಾಗಿದೆ.

ಇಂದು ಬಿಹಾರದ ಪಾಟ್ನಾದಲ್ಲಿ ಸಿಬಿಐ ಮನೀಶ್ ಮತ್ತು ಅಶುತೋಷ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ಮನೀಶ್ ಬಂಧಿಸಲಾಗಿದೆ. ಸಿಬಿಐ ಪ್ರಕರಣದ ತನಿಖೆ ಕೈಗೊಂಡ ಬಳಿಕ ಬಂಧಿಸಿದ ಮೊದಲ ಆರೋಪಿ ಮನೀಶ್.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದ ಆರೋಪಿಗಳನ್ನು ಮನೀಶ್ ತನ್ನ ಕಾರಿನಲ್ಲಿಯೇ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿ, ಪತ್ರಿಕೆ ವಿತರಣೆ ಮಾಡಿದ್ದ. ಅಶುತೋಷ್ ಈ ಅಭ್ಯರ್ಥಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.
ಇಬ್ಬರಿಗೂ ನೋಟಿಸ್: ಮನೀಶ್ ಮತ್ತು ಅಶುತೋಷ್ ಇಬ್ಬರಿಗೂ ಗುರುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ವಿಚಾರಣೆ ಬಳಿಕ ಮನೀಶ್ ಬಂಧಿಸಲಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ 6 ಎಫ್‌ಐಆರ್ ದಾಖಲಾಗಿದೆ.
ಸಿಬಿಐ ತನಿಖೆ ಆರಂಭಕ್ಕೂ ಮುನ್ನ ಪೊಲೀಸರು ಈ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ, ಮಹಾರಾಷ್ಟ್ರ, ದೆಹಲಿದಲ್ಲಿ ಹಲವಾರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಆರೋಪಿಗಳಿಗೆ ಪರೀಕ್ಷೆಗೆ ಮೊದಲೇ ಉತ್ತರ ಪತ್ರಿಕೆಗಳು ಸಿಕ್ಕಿದ್ದವು ಎಂಬ ಮಾಹಿತಿ ಇದೆ.
2024ರ ನೀಟ್ ಪರೀಕ್ಷೆಗೆ ದೇಶಾದ್ಯಂತ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಮೇ 5ರಂದು ಪರೀಕ್ಷೆಯನ್ನು ನಡೆಸಲಾಗಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶದ ಬಳಿಕ 1,500 ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಭಟನೆ ನಡೆಸಿದ್ದರು.
ನೀಟ್ ವಿವಾದದ ಬಗ್ಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ವಿಷಯ ಪ್ರಸ್ತಾಪ ಮಾಡಿದ್ದರು. "ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಲಿದೆ" ಎಂದು ಹೇಳಿದ್ದರು.
"ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ವರದಿಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ. ಸರ್ಕಾರಿ ನೇಮಕಾತಿಗಳು ಮತ್ತು ಪರೀಕ್ಷೆಗಳಲ್ಲಿ ಪಾವಿತ್ರ್ಯತೆ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ" ಎಂದು ತಿಳಿಸಿದ್ದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದು ತಿಳಿಯುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಎನ್‌ಟಿಎ, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿದೆ.
ಹಗರಣ ಬಯಲಿಗೆ ಬಂದಾಗ ಪ್ರಾಥಮಿಕ ತನಿಖೆಯ ವೇಳೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು 30 ರಿಂದ 32 ಲಕ್ಷ ರೂಪಾಯಿಗಳ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಪೊಲೀಸರು ಕೆಲವು ಆರೋಪಿಗಳ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಸುಟ್ಟ ಅವಶೇಷಗಳನ್ನು ಪತ್ತೆ ಹಚ್ಚಿದ್ದರು.












Click it and Unblock the Notifications