ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಮಹಾದಾಸೆ ಬಿಚ್ಚಿಟ್ಟ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಾಯಿ
ಮುಂಬೈ, ಜುಲೈ 25: ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ಫಲವಾಗಿ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಹೋರಾಟದ ಪ್ರಮುಖ ಭಾಗವಾಗಿದ್ದ 'ಕಾಕ್ರೋಚ್ ಜನತಾ ಪಕ್ಷ' (ಸಿಜೆಪಿ)ದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಅವರು ಮೊದಲ ಪ್ರತಿಕ್ರಿಯೆ ನೀಡಿ ಭಾವುಕರಾಗಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ನಿವಾಸಿಗಳಾದ ಭಗವಾನ್ ಶಂಕರ್ ದೀಪ್ಕೆ ಮತ್ತು ಅನಿತಾ ದೀಪ್ಕೆ ದಂಪತಿಯ ಪುತ್ರ ಅಭಿಜಿತ್ ದೀಪ್ಕೆ ದೇಶವ್ಯಾಪಿ ವಿದ್ಯಾರ್ಥಿ ಚಳವಳಿಯ ನೇತೃತ್ವ ವಹಿಸಿದ್ದರು. ಮಗನ ಹೋರಾಟದ ಯಶಸ್ಸಿನ ಬಗ್ಗೆ ಮಾತನಾಡಿದ ತಾಯಿ ಅನಿತಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಜಿತ್ ದೀಪ್ಕೆ ತಾಯಿಯ ಮಹಾದಾಸೆ ಏನು?
'ಅವನಿಗಿನ್ನೂ ಚಿಕ್ಕ ವಯಸ್ಸು. ಆದರೂ ಇಷ್ಟೊಂದು ಸಣ್ಣ ವಯಸ್ಸಿನಲ್ಲೇ ದೇಶಮಟ್ಟದಲ್ಲಿ ದೊಟ್ಟ ಮಟ್ಟದ ಹೋರಾಟವನ್ನು ಮಾಡಿ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾನೆ. ತಾಯಿಯಾಗಿ ನನಗೆ ಆತನ ಬಗ್ಗೆ ಅಪಾರ ಹೆಮ್ಮೆ ಎನಿಸುತ್ತಿದೆ. ಸದ್ಯಕ್ಕೆ ಈ ಎಲ್ಲ ಹೋರಾಟಗಳ ಬಳಿಕ ಆತ ಸುರಕ್ಷಿತವಾಗಿ ಮನೆಗೆ ಮರಳಬೇಕು, ಅದೇ ನಮ್ಮ ಆಸೆಯಾಗಿದೆ,' ಎಂದು ಹೇಳಿದರು.
ಕಷ್ಟ, ಆತಂಕದ ದಿನಗಳ ಬಗ್ಗೆ ಮನದಾಳದ ಮಾತು
ರಾಟದ ದಿನಗಳಲ್ಲಿ ಕುಟುಂಬ ಅನುಭವಿಸಿದ ಕಷ್ಟ ಹಾಗೂ ಆತಂಕವನ್ನು ನೆನಪಿಸಿಕೊಂಡ ಅವರು, 'ಜೂನ್ 7ರಿಂದಲೇ ನಮ್ಮ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿತ್ತು. ಪ್ರತಿಭಟನೆಯಲ್ಲಿ ನಿರತನಾಗಿದ್ದ ಮಗನಿಗೆ ಏನಾಗುತ್ತದೋ ಎಂಬ ಭಯ ನಿರಂತರವಾಗಿ ಕಾಡುತ್ತಿತ್ತು. ವಿಶೇಷವಾಗಿ ಆತನ ಮೇಲೆ ಹಲ್ಲೆ ನಡೆದ ಘಟನೆಯ ನಂತರ ನಮಗೆ ರಾತ್ರಿಯಿಡೀ ನಿದ್ದೆಯೇ ಬರುತ್ತಿರಲಿಲ್ಲ, ಸರಿಯಾಗಿ ಊಟವೂ ಸೇರುತ್ತಿರಲಿಲ್ಲ. ಆದರೆ ಕೊನೆಗೂ ವಿದ್ಯಾರ್ಥಿ ಸಮುದಾಯದ ಶ್ರಮಕ್ಕೆ ನ್ಯಾಯ ಸಿಕ್ಕಿರುವುದು ನಮಗೆ ತುಂಬಾ ಸಂತಸ ತಂದಿದೆ,' ಎಂದು ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ಎಂದು ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಹೋರಾಟವು ಸಚಿವರ ರಾಜೀನಾಮೆಯೊಂದಿಗೆ ಪ್ರಮುಖ ಹಂತ ತಲುಪಿದೆ. ಈ ಚಳವಳಿಯ ಪ್ರಮುಖ ರೂವಾರಿ ಅಭಿಜಿತ್ ದೀಪ್ಕೆ ಅವರ ಕುಟುಂಬದಲ್ಲಿ ಈಗ ನಿರಾಳತೆ ಹಾಗೂ ಹೆಮ್ಮೆಯ ವಾತಾವರಣ ಮನೆ ಮಾಡಿದೆ ಎನ್ನಲಾಗುತ್ತಿದೆ.


Click it and Unblock the Notifications
